ಔಷಧಿಸಸ್ಯಗಳು: ಮಾನವನ ಮತ್ತು ಪಶುಪಕ್ಷಿಗಳ ಯಾವುದೇ ರೀತಿಯ ರೋಗಗಳನ್ನು ಶಮನ ಮಾಡುವ ಕಾರ್ಯದಲ್ಲಿ ಉಪಯುಕ್ತವೆನಿಸಬಲ್ಲ ಉತ್ಪನ್ನಗಳನ್ನು ನೀಡುವ ಗಿಡ, ಬಳ್ಳಿ, ಮರ, ಮೂಲಿಕೆ ಮುಂತಾದ ಸಸ್ಯಗಳು (ಮೆಡಿಸನಲ್ ಪ್ಲ್ಯಾಂಟ್ಸ್‌). ಪ್ರಾಚೀನ ಕಾಲದಿಂದಲೂ ಔಷಧಕ್ಕೆ ಬರತಕ್ಕ ಅಂಥ ಅನೇಕ ಸಸ್ಯಗಳು ಮಾನವನಿಗೆ ಗೊತ್ತಾಗಿದೆ. ಅನುಭವದಿಂದ ಕಂಡುಕೊಂಡ ಅವುಗಳ ರೋಗಪರಿಹಾರಕ ಗುಣ ದೃಢಪಟ್ಟಂತೆಲ್ಲ ಅವುಗಳ ಬಳಕೆಯೂ ಹೆಚ್ಚುತ್ತ ಬಂದಿದೆ. ಮಾನವನ ನಾಗರೀಕತೆ ಹಾಗೂ ಜ್ಞಾನ ಬೆಳೆದಂತೆಲ್ಲ ಈ ಔಷಧಗಳ ತಯಾರಿಕಾ ವಿಧಾನಗಳೂ ರೂಪಗಳೂ ಸುಧಾರಿಸುತ್ತ ಬಂದಿವೆ. ಆಯುರ್ವೇದ ಮತ್ತು ಯುನಾನಿ ಪದ್ಧತಿಯ ಔಷಧಗಳಲ್ಲೆಲ್ಲ ಸಸ್ಯಗಳ ಒಂದಲ್ಲ ಒಂದು ಭಾಗ ಬಳಕೆಯಾಗುವುದುಂಟು. ಅನೇಕ ಅಲೊಪತಿಕ್ ಔಷಧಗಳೂ ಸಸ್ಯಗಳ ಉತ್ಪನ್ನಗಳಿಂದಲೇ ಸಿದ್ಧವಾಗುತ್ತವೆ. ಸಸ್ಯಗಳಿಂದ ದೊರಕಿದ ಭಾಗಗಳೆಲ್ಲ ನೇರವಾಗಿ ರೋಗಪರಿಹಾರಕ್ಕೆ ಯೋಗ್ಯವಾಗಿಲ್ಲದಿರಬಹುದು; ಅವುಗಳಲ್ಲಿ ಕೆಲವನ್ನು ವಿಶೇಷ ರೀತಿಯಿಂದ ಪರಿಷ್ಕರಿಸುವುದು ಅವಶ್ಯವಾಗುತ್ತದೆ.

ಔಷಧಿಸಸ್ಯಗಳೆಲ್ಲ ನಿಸರ್ಗದಲ್ಲಿ ಹೆಚ್ಚಾಗಿ ಸ್ವೇಚ್ಛೆಯಾಗಿಯೇ ಬೆಳೆಯುತ್ತದೆ. ಕೆಲವೊಂದನ್ನು ಪ್ರಯತ್ನಪುರ್ವಕವಾಗಿಯೂ ಬೆಳೆಸುವುದುಂಟು. ಕೆಲವು ವಿಶಿಷ್ಟ ಸಸ್ಯಗಳ ವಿವಿಧ ಭಾಗಗಳನ್ನು ಸಂಗ್ರಹಿಸಿ ಅವನ್ನು ಪರಿಷ್ಕರಿಸಿ ಔಷಧರೂಪಕ್ಕೆ ಪರಿವರ್ತಿಸುವ ತಯಾರಿಕಾ ಸಂಸ್ಥೆಗಳಿಗೆ ಕಳುಹಿಸಿ ಕೊಡುವುದುಂಟು. ಸಸ್ಯಗಳ ಬೇರು, ಕಾಂಡ, ಎಲೆ, ಹೂ, ಹಣ್ಣು, ಕಾಯಿ, ಬೀಜ ಮತ್ತು ತೊಗಟೆ ಇತ್ಯಾದಿ ಭಾಗಗಳೆಲ್ಲವನ್ನು ಔಷಧತಯಾರಿಕೆಯಲ್ಲಿ ಬಳಸಲಾಗುತ್ತದೆ. ಸಸ್ಯಗಳ ವಿವಿಧ ಭಾಗಗಳಲ್ಲಿರುವ ಕೆಲವು ನಿರ್ದಿಷ್ಟ ರಾಸಾಯನಿಕ ಘಟಕಗಳಿಂದಲೇ ಅವಕ್ಕೆ ರೋಗಪರಿಹಾರಕ ಸಾಮಥರ್ಯ್‌ ಒದಗುತ್ತದೆ. ಈ ರಾಸಾಯನಿಕ ಘಟಕಗಳು ಮಾನವನ ಶರೀರದಲ್ಲಿ ಕೆಲವು ವಿಶಿಷ್ಟ ರೀತಿಯ ಜೈವಿಕ ಕ್ರಿಯೆ ನಡೆಸಿ ರೋಗಶಮನ ಮಾಡಬಲ್ಲವು. ಇಲ್ಲಿ ಪ್ರಾತಿನಿಧಿಕವಾಗಿರುವಂತೆ ಪ್ರಮುಖ ಹಾಗೂ ನಿತ್ಯಬಳಕೆಯ ಕೆಲವು ಔಷಧಿಸಸ್ಯಗಳನ್ನು ಮಾತ್ರ ಪ್ರಸ್ತಾಪಿಸಲಾಗುವುದು. 

ಔಷಧಿಸಸ್ಯಗಳನ್ನು ಎರಡು ವರ್ಗಗಳಾಗಿ ವಿಂಗಡಿಸಬಹುದು: ಕೆಳವರ್ಗದ ಸಸ್ಯಗಳಿಂದ ಅಂದರೆ ಬೂಷ್ಟು (ಫಂಗೈ) ಮತ್ತು ಪಾಚಿ (ಆಲ್ಗೆ) ಗಳಿಂದ ಉತ್ಪಾದನೆಯಾಗುವ ಔಷಧಗಳು; ಮೇಲುವರ್ಗದ ಸಸ್ಯಗಳಿಂದ ಉತ್ಪಾದನೆಯಾಗುವ ಔಷಧಗಳು.

ಕೆಳವರ್ಗದ ಸಸ್ಯಗಳಿಂದ ಉತ್ಪಾದನೆಯಾಗುವ ಔಷಧಗಳು: 1ಪೆನಿಸಿಲಿನ್: ಇದು ಅಲೊಪತಿಕ್ ಪದ್ಧತಿಯ ರೋಗಚಿಕಿತ್ಸಾಕ್ರಮ ಹಾಗೂ ಔಷಧಗಳಲ್ಲಿ ಒಂದು ಪ್ರಸಿದ್ಧ ಜೀವಿರೋಧಕ (ಆಂಟಿಬಂiÀiÁಟಿಕ್), ಪೆನಿಸಿಲಿಯಂ ನೊಟೇಟಂ ಎಂಬ ಹಸಿರು ಬೂಷ್ಟಿನಿಂದ ತಯಾರಾಗುತ್ತದೆ. ಈ ಬೂಷ್ಟನ್ನು ಕೊಳೆಯುವ ಹಣ್ಣು ಹಂಪಲು ಮತ್ತಿತರ ಕೃತಕ ಮಾಧ್ಯಮಗಳಲ್ಲಿ ಬೆಳೆಸಬಹುದು. ಇದಿರುವ ಸಸ್ಯ ದೇಹದಲ್ಲಿ ಸೊಂಪಾಗಿ ಮತ್ತು ಶಾಖೋಪಶಾಕೆಗಳಾಗಿ ಕವಲೊಡೆವ ಎಳೆಗಳಿರುತ್ತವೆ. ಅವುಗಳಿಗೆ ಹೈಪೆ ಎಂದು ಹೆಸರು. ಅವು ಬೆಳೆಯುವ ಮಾಧ್ಯಮದಲ್ಲಿ ಪೆನಿಸಿಲಿನ್ ಎಂಬ ವಸ್ತುವನ್ನು ಸ್ರವಿಸುತ್ತವೆ. ಈ ವಸ್ತುವನ್ನು ಮುಂದೆ ಬೇರ್ಪಡಿಸಿ ಶುದ್ಧೀಕರಿಸಲಾಗುತ್ತದೆ. ಪೆನಿಸಿಲಿಯಂ ಕ್ರೈಸೊಜಿನಂ ಎಂಬ ಇನ್ನೊಂದು ವಿಶಿಷ್ಟ ಬಗೆಯ ಬೂಷ್ಟಿನಿಂದಲೂ ಪೆನಿಸಿಲಿನ್ ಸಿದ್ಧವಾಗುತ್ತದೆ. ಪೆನಿಸಿಲಿನ್ ಎಂಬ ಔಷಧವನ್ನು ವ್ಯಾಪಕವಾಗಿ ಅನೇಕ ರೀತಿಯಲ್ಲಿ ಬಳಸಾಗುತ್ತದೆ. ಬ್ಯಾಕ್ಟೀರಿಯಗಳಿಂದಾಗುವ ಸಂಸರ್ಗದೋಷಗಳಿಗೂ ಗನೋರಿಯ, ನ್ಯೂಮೋನಿಯ ಮುಂತಾದ ರೋಗಗಳಿಗೂ ಕೆಲವು ಸ್ಥಳೀಯ ಸಂಸರ್ಗದೋಷಗಳಿಗೂ ಯಶಸ್ವೀ ಔಷಧವಾಗಿ ಪೆನಿಸಿಲಿನ್ ಬಳಕೆಯಾಗುತ್ತಿದೆ.

ಸ್ಟ್ರೆಪ್ಟೊಮೈಸಿಸ್ ಗ್ರಿಸಿಯಸ್ ಎಂಬ ಬೂಷ್ಟಿನಿಂದ ಸ್ಟ್ರೆಪ್ಟೊಮೈಸಿನ್ ಎಂಬ ಜೀವಿರೋಧಕ ಔಷಧವೂ ಸ್ಟ್ರೆಪ್ಟೊಮೈಸಿಸ್ ವೆನೆಜ಼Æಲೆ ಎಂಬುದರಿಂದ ಕ್ಲೋರೊಮೈಸಿಟಿನ್ ಎಂಬುದೂ ಸ್ಟ್ರೆಪ್ಟೊಮೈಸಿಸ್ ಆರಿಯೋಫೇಸಿಯನ್ಸ್‌ ಎಂಬುದರಿಂದ ಆರಯೊಮೈಸಿನ್ ಎಂಬುದೂ ಸ್ಟ್ರಪ್ಟೊಮೈಸಿಸ್ ರಿಮೊಸಸ್ ಎಂಬುದರಿಂದ ಟೆರಮೈಸಿನ್ ಎಂಬುದೂ ಸಿದ್ಧವಾಗುತ್ತವೆ. ಈ ಬಗೆಯ ಬೂಷ್ಟುಗಳೆಲ್ಲ ಪುತಿಜನ್ಯ (ಸ್ಯಾಪ್ರೊಫೈಟ್) ಸಸ್ಯಗಳಾಗಿದ್ದು, ಅವುಗಳನ್ನು ಕೃತಕ ಮಾಧ್ಯಮಗಳಲ್ಲಿ ಬೆಳೆಸಬಹುದು. ಸ್ಟ್ರಪ್ಟೊಮೈಸಿನ್ ಎಂಬುದನ್ನು ನ್ಯುಮೋನಿಯ, ಕ್ಷಯ, ಮಿದುಳುಜ್ವರ (ಮೆನಿನ್ಜೈಟಿಸ್) ಮತ್ತು ಕೆಲವು ಸ್ಥಳೀಯ ರೂಪದ ಸೋಂಕುಗಳಿಗೆ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಕ್ಲೋರೊಮೈಸಿಟಿನ್ ಎಂಬುದನ್ನು ಟೈಫಾಯಿಡ್ ಜ್ವರ ಮತ್ತು ನ್ಯೂಮೋನಿಯಗಳಿಗೆ ಬಳಸುತ್ತಾರೆ. ಹನಿಗಳ ರೂಪದಲ್ಲಿ ಕಿವಿಯೊಳಕ್ಕೂ (ಇಯರ್ ಡ್ರಾಪ್ಸ್‌) ಬಳಸುವುದುಂಟು. ಆರಿಯೋಮೈಸಿನ್ ಎಂಬುದನ್ನು ವೈರಸ್ ಸಂಬಂಧದ ನ್ಯೂಮೋನಿಯ, ನಾಯಿಕೆಮ್ಮು ಮತ್ತು ಕಣ್ಣಿನ ಸೋಂಕುಗಳಿಗೆ ಬಳಸುವುದುಂಟು. ಟೆರಮೈಸಿನ್ ಎಂಬುದನ್ನು ರಿಕೆಟ್ಸಿಯ (ಮೆದುಮೂಳೆ) ಎಂಬ ರೋಗಕ್ಕೆ ಬಳಸಲಾಗುತ್ತದೆ.

1 ಎರ್ಗಟ್: ಕ್ಲಾವಿಸೆಪ್ಸ್‌ ಪಪುರ್ಯ್‌ರಿಯ ಎಂಬ ಬೂಷ್ಟಿನಿಂದ ತಯಾರಾಗುವ ವಸ್ತು. ಈ ಸಸ್ಯ ರೈ, ಬಾರ್ಲಿ, ಓಟ್ಸ್‌ ಮತ್ತು ಇತರ ಧಾನ್ಯಗಿಡಗಳ ಮೇಲೆ ಪರೋಪಜೀವಿಯಾಗಿ ಬೆಳೆಯುತ್ತದೆ. ಆ ಗಿಡಗಳ ಮೇಲೆ ಧಾನ್ಯಕ್ಕೆ ಬದಲು ಸ್ಕ್ಲಿರೋಷಿಯಂ ಎಂಬ ಕುಡುಗೋಲಿನಾಕಾರದ ಚಿಕ್ಕ ಶುಷ್ಕಫಲಗಳು ನಿರ್ಮಾಣವಾಗುತ್ತವೆ. ಇವಕ್ಕೆ ಎರ್ಗಟ್ ಎಂದು ಹೆಸರು. ಇದನ್ನು ವಿಶಿಷ್ಟರೀತಿ ಪರಿಷ್ಕರಿಸಿ ಸ್ತ್ರೀಯರ ಗರ್ಭಾಶಯ ಸಂಬಂಧದ ರೋಗಗಳಿಗೂ ರಕ್ತಸ್ರಾವಕ್ಕೂ ರಕ್ತದ ಒತ್ತಡವನ್ನು ವರ್ಧಿಸುವುದಕ್ಕೂ ಔಷಧ ರೂಪದಲ್ಲಿ ಬಳಸಲಾಗುತ್ತದೆ. ವಿಶೇಷವಾಗಿ ಸ್ತ್ರೀಯರಲ್ಲಿ ಜನನಕಾಲದ ಅನಂತರ ಇದರ ಬಳಕೆ ಹೆಚ್ಚು. 

 ಪಾಚಿಯಿಂದ ದೊರೆಯುವ ಔಷಧಗಳು:  
 ಅಗಾರ್: ಇದು ಜಿಲೆಟಿನ್ಸಿನಂಥ ಒಂದು ಅಂಟು ವಸ್ತು. ಇದನ್ನು ಜಿಲಾಡಿಯಂ ಕಾಂಡ್ರಸ್, ಗ್ರಾಸಿಲೇರಿಯ ಮತ್ತು ಇನ್ನೂ ಹಲವಾರು ಬಗೆಯ ಪಾಚಿಗಳಿಂದ ತಯಾರಿಸಲಾಗುತ್ತದೆ. ಅಗಾರ್ ಎಂಬುದನ್ನು ಔಷಧಗಳಲ್ಲಿ ಸುಲಭವಾಗಿ ಹೀರಿಕೊಳ್ಳುವ ಮತ್ತು ನುಣುಪಾಗಿ ಜಾರುವ ವಸ್ತುಗಳಂತೆ ಬಳಸುವುದು ಹೆಚ್ಚು. ಇದನ್ನು ಸೂಕ್ಷ್ಮಜೀವಿಗಳ ಬೆಳೆವಣಿಗೆಗೆ ಪ್ರಯೋಗ ಮಂದಿರಗಳಲ್ಲಿ ಕೃತಕ ಮಾಧ್ಯಮವಾಗಿ ಬಳಸುವುದೂ ಉಂಟು.
 ಕ್ಯಾಲಿಯೊಮಿನ್: ಕೆಲವು ಬಗೆಯ ಪಾಚಿಗಳಿಂದ ದೊರೆಯುವ ಇದನ್ನು ಸಂಧಿವಾತಗಳಿಗೆ (ಗೌಟ್) ಔಷಧರೂಪದಲ್ಲಿ ಬಳಸುವುದುಂಟು.
 ಅಯೋಡಿನ್: ಇದು ಲ್ಯಾಮಿನೇರಿಯ, ಫ್ಯೂಕಸ್, ಎಕಲೋನಿಯ ಮುಂತಾದ ಕೆಲವು ಬಗೆಯ ಸಮುದ್ರ ಪಾಚಿಗಳಿಂದ ದೊರೆಯುತ್ತದೆ. ರಷ್ಯ ದೇಶದಲ್ಲಿ ಫಿಲ್ಲೋಫೋರಾ ಎಂಬ ಒಂದು ಬಗೆಯ ಕೆಂಪು ಪಾಚಿಯಿಂದಲೂ ಇದು ಸಿದ್ಧವಾಗುತ್ತದೆ. ಇದನ್ನು ಹೆಚ್ಚಾಗಿ ಗಳಗಂಡ (ಗಾಯ್ಟರ್) ರೋಗಕ್ಕೂ ಸಾಮಾನ್ಯ ಆರೋಗ್ಯಕ್ಕೂ ಬಳಸುವುದುಂಟು.
 ಕ್ಲೊರೆಲ್ಲಿನ್: ಇದು ಕ್ಲೊರೆಲ್ಲ ಎಂಬ ಒಂದು ಬಗೆಯ ಹಸಿರು ಪಾಚಿಯಿಂದ ತಯಾರಾಗುವ ಜೀವವಿರೋಧಕ. ಇದನ್ನು ಕೆಲವು ಬಗೆಯ ಬ್ಯಾಕ್ಟೀರಿಯಗಳ ವಿರುದ್ಧ ಯಶಸ್ವಿಯಾಗಿ ಬಳಸಲಾಗುತ್ತದೆ.

 ಮೇಲ್ಮಟ್ಟದ ಸಸ್ಯಗಳಿಂದ ಉತ್ಪಾದನೆಯಾಗುವ ಔಷಧಗಳು
 ಬೇರು ಮತ್ತು ಕಂದ-ಗೆಡ್ಡೆಗಳಿಂದ ದೊರೆಯುವ ಔಷಧಗಳು 
ಈ ಬಗೆಯ ಔಷಧಗಳನ್ನೆಲ್ಲ ಬೇರು ಇಲ್ಲವೆ ಭೂಮಿಯೊಳಗಿರುವ ಕಂದ-ಗೆಡ್ಡೆಗಳಿಂದ ಉತ್ಪಾದಿಸಲಾಗುತ್ತದೆ.
 ಅಕೊನಿಟಂ: ಇದು ರ್ಯಾನನ್ಕ್ಯುಲೇಸಿ ಕುಟುಂಬಕ್ಕೆ ಸೇರಿದ ಸಸ್ಯ. ಇದರ ಸು. 20 ಜಾತಿಯ ಸಸ್ಯಗಳು ಪರ್ವತದ ತಪ್ಪಲು ಪ್ರದೇಶಗಳಲ್ಲಿ ಬೆಳೆಯುತ್ತದೆ. ಅವುಗಳಲ್ಲಿ ಕೆಲವು ಉಪಯುಕ್ತ ಔಷಧಿ ಸಸ್ಯಗಳಾಗಿರುವಂತೆ ಕೆಲವು ವಿಷಪುರಿತ ಸಸ್ಯಗಳೂ ಆಗಿರುವುದುಂಟು. ಅಮೆರಿಕ ದೇಶದಲ್ಲಿ ಅಕೊನಿಟಂ ನೀಪೆಲ್ಲಸ್ ಎಂಬ ಜಾತಿಯೂ ಅಕೊನಿಟಂ ಹೆಟರೊಫಿಲ್ಲಂ (ಅತಿವಿಷ) ಎಂಬುದೂ ಮುಖ್ಯ ಪ್ರಭೇದಗಳೆನಿಸಿದೆ. ಈ ಸಸ್ಯಗಳ ಬೇರು ಮತ್ತು ಎಲೆಗಳಿಂದ ದೊರೆಯುವ ಔಷಧಿಗಳಿಂದಾಗಿ ಇವಕ್ಕೆ ಮಹತ್ತ್ವ ಬಂದಿದೆ. ಇವುಗಳಲ್ಲಿರುವ ಕ್ಷಾರೀಯ (ಆಲ್ಕಲಾಯಿಡ್) ಘಟಕಗಳಿಂದ ಅಕೊನೈಟ್ ಎಂಬ ಔಷಧವನ್ನು ತಯಾರಿಸುತ್ತಾರೆ. ಅದು ಬಾವು ಮತ್ತು ಜಠರ ಸಂಬಂಧದ ರೋಗಗಳಿಗೆ ಉಪಯುಕ್ತವೆನಿಸಿದೆ. ಅದನ್ನು ಕ್ವಿನ್ಯೇನಿಗೆ ಬದಲಾಗಿಯೂ ಮತ್ತು ಜ್ವರ ನಿಂತ ಮೇಲೆ ಸೂಕ್ತ ಶಕ್ತಿವರ್ಧಕವಾಗಿಯೂ ಬಳಸಲಾಗುತ್ತದೆ. 
 ಪೋಡೊಫಿಲ್ಲಂ: ಇದು ಬರ್ಬೆರಿಡೇಸಿ ಕುಟುಂಬಕ್ಕೆ ಸೇರಿದ ಒಂದು ಚಿಕ್ಕ ಮೂಲಿಕೆಯಂತಿದ್ದು ನಿರಂತರ ಕಾಲ ಬೆಳೆಯುವ ಬೇರು ಮತ್ತು ಕಂದ-ಗಡ್ಡೆಗಳನ್ನು ಒಳಗೊಂಡಿರುತ್ತದೆ. ಇದು ಹಿಮಾಲಯದ ತಪ್ಪಲಿನ ಸಮಶೀತೋಷ್ಣ ಪ್ರದೇಶಗಳಲ್ಲಿ, ಅಂದರೆ, ಪಂಜಾಬ್, ಹಿಮಾಚಲಪ್ರದೇಶ ಮತ್ತು ಕಾಶ್ಮೀರಗಳಲ್ಲಿ ವಿಶೇಷವಾಗಿ ಬೆಳೆಯುತ್ತದೆ. ಭಾರತದ ಈ ಸಸ್ಯಗಳಿಗೆ ಮೊದಲು ಅಷ್ಟಾಗಿ ಬೇಡಿಕೆ ಇರಲಿಲ್ಲ. ಆದರೆ ಕಳೆದ ಮಹಾಯುದ್ಧದಲ್ಲಿ ಅಮೆರಿಕದಿಂದ ಪುರೈಕೆ ನಿಂತುಹೋದಾಗ ಇಲ್ಲಿನ ಸಸ್ಯಗಳಿಗೆ ವಿಶೇಷ ಬೇಡಿಕೆ ಬಂದಿತು. ಇದರಲ್ಲಿ ಒಂದು ಬಗೆಯ ಪೋಡೊಫಿಲ್ಲಿನ್ ಎಂಬ ರಾಳ ಅಥವಾ ಅಂಟು (ರೆಸಿನ್) ಇರುತ್ತದೆ. ಇದನ್ನು ಯಕೃತ್ತಿನ ಉತ್ತೇಜಕವಾಗಿಯೂ ಪಿತ್ತರಸ ಹೆಚ್ಚು ಉತ್ಪತ್ತಿಯಾಗುವಂತೆ ಮಾಡಿ ಅದು ಕರುಳಿನೊಳಕ್ಕೆ ಸುರಿಯುವಂತೆ ಮಾಡುವುದಕ್ಕೂ ವಿರೇಚಕವಾಗಿಯೂ ಬಳಸಲಾಗುತ್ತದೆ.
 ಕೋಷ್ಟ: ವಾಣಿಜ್ಯದ ದೃಷ್ಟಿಯಿಂದ ಮಹತ್ತ್ವದ್ದಾದ ಇದು ಸಾಸುರಿಯಾ ಲೆಪ್ಪ ಮತ್ತು ಸಾ. ಕ್ಯಾಂಡಿಕೆನ್ಸ್‌ ಎಂಬ ಬಹುವಾರ್ಷಿಕ ಮೂಲಿಕೆಗಳ ಬೇರುಗಳಿಂದ ದೊರೆಯುತ್ತದೆ. ಇವು ಕಂಪಾಸಿಟಿ ಸಸ್ಯಗಳಾಗಿದ್ದು ಕಾಶ್ಮೀರ ಪ್ರದೇಶಗಳಲ್ಲಷ್ಟೇ ಬೆಳೆಯುತ್ತದೆ. ಬೇರುಗಳನ್ನು ಸೆಪ್ಟೆಂಬರ್ ಅಕ್ಟೋಬರ್ ತಿಂಗಳುಗಳಲ್ಲಿ ಸಂಗ್ರಹಿಸಿ, 2-3 ಅಂಗುಲಗಳಷ್ಟು ಉದ್ದುದ್ದವಾಗಿರುವಂತೆ ಕತ್ತರಿಸುತ್ತಾರೆ. ಬೇರಿನಿಂದ ದೊರೆಯುವ ಘಟಕಗಳನ್ನು ಕೆಮ್ಮು, ದಮ್ಮು ಮತ್ತು ಚರ್ಮರೋಗಗಳಿಗೆ ಬಳಸಲಾಗುತ್ತದೆ. ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿಯೂ ಇದರ ಬಳಕೆ ಹೆಚ್ಚು. ಕಾಶ್ಮೀರದಲ್ಲಿ ಶಾಲುಗಳನ್ನು ಕೀಟಗಳಿಂದ ರಕ್ಷಿಸಲೂ ಇದನ್ನು ಬಳಸುವುದುಂಟು. ಈ ಸಸ್ಯಗಳಿಂದ ದೊರೆಯುವ ಔಷಧಗಳಲ್ಲಿ ಕ್ಷಾರೀಯ ವಸ್ತುಗಳು (ಗ್ಲೂಕೊಸೈಡ್) ಮತ್ತು ಸಾರ (ಎಸೆನ್ಷಿಯಲ್) ತೈಲ ಮುಂತಾದ ಅಂಶಗಳು ಇರುತ್ತದೆ.
 ಕಾಲ್ಜಿಕಮ್: ಇದು ಲಿಲಿಯೇಸಿ ಕುಟುಂಬದ ಸಸ್ಯ. ಕಾಲ್ಚಿಕಮ್ ಆಟಮ್ನೇಲ್ ಮತ್ತು ಕಾ.ಲ್ಯೂಟಿಯಂ ಎಂಬ ಸಸ್ಯಗಳ ಶುಷ್ಕ ಕಂದ-ಗೆಡ್ಡೆಗಳಿಂದ ಕಾಲ್ಚಿಸಿನ್ ಔಷಧ ತಯಾರಿಸಲಾಗುತ್ತದೆ. ಅವುಗಳನ್ನು ವಾತ (ರುಮ್ಯಾಟಿಸಂ) ಮತ್ತು ಸಂಧಿವಾತಗಳಿಗೆ (ಗೌಟ್) ಔಷಧದ ರೂಪದಲ್ಲಿ ಬಳಸಲಾಗುತ್ತದೆ. ಬಾವು ಮತ್ತು ನೋವುಗಳನ್ನು ಶಮನ ಮಾಡಲೂ ಬಾಹ್ಯ ಲೇಪನಗಳಂತೆ ಬಳಸುವುದುಂಟು. ಆಧುನಿಕ ತಳಿವಿಜ್ಞಾನ ಪರಿಶೀಲನೆಗಳಲ್ಲಿ ಕ್ರೋಮೊಸೋಮುಗಳ ಸಂಖ್ಯೆಯನ್ನು ಇಮ್ಮಡಿಗೊಳಿಸಲು ಸಹ ಕಾಲ್ಚಿಸಿನನ್ನು ಬಳಸಲಾಗುತ್ತದೆ.
 ಜಲಪ್ : ಇದು ಎಕ್ಸೊಗೋನಿಯಂ ಪರ್ಗ ಎಂಬ ಸಸ್ಯದ ಹಸಿರು ಬೇರುಗಳಿಂದ ತೆಗೆದ ಅಂಟಿನಂಥ ಔಷಧ. ಇದನ್ನು ಭಾರತ, ಮೆಕ್ಸಿಕೊ, ಜಮೈಕ ಮುಂತಾದ ಕಡೆಗಳಲ್ಲಿ ಬೆಳೆಸಲಾಗುತ್ತದೆ. ಇದಕ್ಕೆ ಉತ್ತಮ ರೇಚಕಗುಣ ಉಂಟು.
 ಜೆನ್ಶಿಯನ್ : ಇದು ಜೆನ್ಶಿಯಾನಾ ಲ್ಯೂಟಿಯ (ಕಿರಿಯಾತು) ಎಂಬ ಸಸ್ಯದ ಕಂದ-ಗೆಡ್ಡೆ ಮತ್ತು ಬೇರುಗಳಿಂದ ದೊರೆಯುತ್ತದೆ. ಅದನ್ನು ತುಂಡರಿಸಿ ಒಣಗಿಸಿ ಮಾರಾಟಕ್ಕೆ ಸಿದ್ಧಪಡಿಸುವರು. ಈ ಸಸ್ಯಗಳು ಯುರೋಪ್ ಖಂಡದ ಪರ್ವತ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಜೆನ್ಶಿಯನ್ ಎಂಬುದರಲ್ಲಿ ಕೆಲವು ಬಗೆಯ ಗ್ಲೂಕೊಸೈಡ್ಸ್‌ ಎಂಬ ಘಟಕಗಳಿವೆ. ಜೆನ್ಶಿಯನನ್ನು ಒಂದು ಶಕ್ತಿವರ್ಧಕವಾಗಿ ಬಳಸುವುದು ವಾಡಿಕೆ.
 ಸ್ಕ್ವಿಲ್ಸ್‌ : ಇವು ಅರ್ಜಿನಿಯ ಮ್ಯಾರಿಟಿಮ ಮತ್ತು ಅ.ಇಂಡಿಕ ಎಂಬ ಸಸ್ಯಗಳ ಲಶುನಗಳಿಂದ (ಬಲ್ಬ್‌್ಸ) ದೊರೆಯುತ್ತವೆ. ಲಿಲಿಯೇಸಿ ಕುಟುಂಬಕ್ಕೆ ಸೇರಿದ ಸಸ್ಯಗಳಿವು. ಇವುಗಳಲ್ಲಿ ಕೆಲವು ಬಗೆಯ ಗ್ಲೂಕೊಸೈಟ್ ಎಂಬ ಘಟಕಗಳಿವೆ. ಹೃದಯಕ್ರಿಯೆಯನ್ನು ಉದ್ದೀಪನಗೊಳಿಸಬಲ್ಲ ಶಕ್ತಿ ಇವುಗಳಿಗಿದೆ. ಇವನ್ನು ಶ್ವಾಸನಾಳ ಸಂಬಂಧದ ದೀರ್ಘಕಾಲದ ರೋಗಗಳಿಗೆ ಪಾಕದ ರೂಪದಲ್ಲಿ (ಸಿರಪ್) ಔಷಧವಾಗಿ ಬಳಸಲಾಗುತ್ತದೆ.
 ಅಬ್ರೊಮ ಅಗಸ್ಟ: ಇದು ಸ್ಟರ್ಕ್ಯೂಲಿಯೇಸಿ ಕುಟುಂಬಕ್ಕೆ ಸೇರಿದ ಸಸ್ಯ. ಇದರ ಬೇರುಗಳಿಂದ ತೆಗೆದ ವಸ್ತು ಸ್ತ್ರೀಯರ ಗರ್ಭಕೋಶದ ತೊಂದರೆಗಳು ಮತ್ತು ಮುಟ್ಟುದೋಷಗಳಿಗೆ ಸಿದ್ಧ ಔಷಧ. ಈ ಔಷಧವನ್ನು ನೀರು ಮತ್ತು ಮೆಣಸಿನೊಡನೆ ಕೂಡಿಸಿ ಸರಿಯ ರೂಪದಲ್ಲಿ ಬಳಸುವುದುಂಟು.
 ಅರಿಶಿನ : ಇದು ಜಿಂಜಿûಬರೇಸಿ ಕುಟುಂಬಕ್ಕೆ ಸೇರಿದ ಕಕೂರ್ಯ್‌ಮ ಲಾಂಗ ಮತ್ತು ಕಕೂರ್ಯ್‌ಮ ಡೊಮೆಸ್ಟಿಕ ಎಂಬ ಸಸ್ಯಗಳಿಂದ ದೊರೆಯುತ್ತದೆ. ಈ ಸಸ್ಯಗಳ ಎತ್ತರ ಬೆಳೆಯುವ ಮೂಲಿಕೆಗಳಂತಿದ್ದು, ಭೂಮಿಯೊಳಗೆ ಕಂದ-ಗೆಡ್ಡೆಗಳನ್ನು ಉತ್ಪಾದಿಸುತ್ತವೆ. ಇವುಗಳನ್ನು ಅನೇಕ ಕಡೆ ಮಲೆನಾಡಿನ ಪ್ರದೇಶಗಳಲ್ಲಿ ಬೆಳೆಸುವರು. ಇವುಗಳ ಕಂದಗಳಿಂದ ದೊರೆಯುವ ಈ ವಸ್ತುವಿಗೆ ಉದ್ದೀಪನ ಶಕ್ತಿ. ವಾತಹರ ಶಕ್ತಿ. ರಕ್ತಶುದ್ಧೀಕರಣ ಶಕ್ತಿ. ಇತ್ಯಾದಿ ವಿಶೇಷ ಗುಣಗಳಿವೆ. ಇದನ್ನು ಭೇದಿ, ಬಿಟ್ಟು ಬಿಟ್ಟು ಬರುವ ಜ್ವರ, ಕಾಮಾಲೆ ಮತ್ತು ಯಕೃತ್ತಿನ ದೋಷಗಳು ಇತ್ಯಾದಿಗಳಿಗೂ ಬಳಸುವುದುಂಟು. ಕೆಲವು ಚರ್ಮರೋಗಗಳಿಗೆ ಗೆಡ್ಡೆಯ ರಸ ಅಥವಾ ಪುಡಿಯನ್ನು ಬಾಹ್ಯಲೇಪನವಾಗಿ ಉಪಯೋಗಿಸಲಾಗುತ್ತದೆ.
 ಇಂಗು : ಇದು ಅಂಬೆಲಿಫೆರಿ ಎಂಬ ಕುಟುಂಬಕ್ಕೆ ಸೇರಿದ ಫೆರುಲ ಫೀಟಿಡ ಮತ್ತು ಫೆ. ನಾರ್ತೆಕ್ಸ್‌ ಎಂಬ ಸಸ್ಯಗಳ ಕಾಂಡದ ಕೆಳಭಾಗದಿಂದ (ಭೂಮಿಯೊಳಗಿರುವ ಭಾಗ) ಹೊರಬರುವ ಒಂದು ಅಂಟಿನಂಥ ದ್ರವ್ಯ. ವಾಣಿಜ್ಯ ಹಾಗೂ ಬಳಕೆಯ ದೃಷ್ಟಿಯಿಂದ ಇದನ್ನು ಇಂಗು ಅಥವಾ ಹಿಂಗು ಎಂದು ಕರೆಯುವುದುಂಟು. ಈ ಸಸ್ಯಗಳು ದೀರ್ಘಕಾಲ ಬೆಳೆಯುವ ಮೂಲಿಕೆಗಳಾಗಿದ್ದು ವಿಶೇಷವಾಗಿ ಕಾಶ್ಮೀರ ಪಂಜಾಬ್ ರಾಜ್ಯಗಳಲ್ಲಿ ಬೆಳೆಯುತ್ತವೆ. ಇಂಗು ಸಂಬಾರ ಪದಾರ್ಥಗಳಲ್ಲೊಂದು. ಇದಕ್ಕೆ ವಾತಹರ, ಪಚನಕಾರಿ, ಉಪಶಾಮಕ, ಮೂತ್ರವರ್ಧಕ ಇತ್ಯಾದಿ ಪರಿಹಾರ ಗುಣಗಳಿವೆ. ಇದನ್ನು ಉದರಶೂಲೆ (ಹೊಟ್ಟೆನೋವು), ಅಗ್ನಿಮಾಂದ್ಯ, ಅಜೀರ್ಣ, ಚಿತ್ತೋದ್ರೇಕ, ಕಾಲರ ಇತ್ಯಾದಿಗಳಿಗೆ ಸಿದ್ಧೌಷಧವಾಗಿ ಬಳಸುವುದುಂಟು. 
 ಶುಂಠಿ: ಇದು ಜೆಂಜಿûಬರೇಸಿ ಕುಟುಂಬಕ್ಕೆ ಸೇರಿದ ಜಿಂಜಿûಬರ್ ಅಫಿಷಿನೇಲ್ ಎಂಬ ಸಸ್ಯದ ಪ್ರಕಂದಗಳಿಂದ ದೊರೆಯುತ್ತದೆ. ಇದನ್ನು ಭಾರತದಾದ್ಯಂತ ಅನೇಕ ಕಡೆ ಬೆಳೆಸಲಾಗುತ್ತದೆ. ಪ್ರಕಂದಗಳಿಂದ ದೊರೆಯುವ ವಸ್ತುವಾತಹರ, ಉದ್ದೀಪಕ ಹಾಗೂ ಚುರುಕುಗೊಳಿಸುವಂಥದು ಮತ್ತು ವಿಶಿಷ್ಟ ತೀಕ್ಷ್ಣ ವಾಸನೆಯುಳ್ಳದ್ದು. ಇದನ್ನು ಜಠರ ಮತ್ತು ಕರುಳು ಸಂಬಂಧದ ದೋಷಗಳು, ಅಜೀರ್ಣ, ಹೊಟ್ಟೆನೋವು, ವಾಂತಿ, ಆಮಶಂಕೆ ಮತ್ತು ಕಾಲರ ಇತ್ಯಾದಿ ರೋಗಗಳಿಗೆ ಒಳ್ಳೆಯ ಔಷಧವಾಗಿ ಬಳಸಲಾಗುತ್ತದೆ.
 ಈರುಳ್ಳಿ : ಇದು ಲಿಲಿಯೇಸಿ ಕುಟುಂಬಕ್ಕೆ ಸೇರಿದ ಅಲ್ಲಿಯಂ ಸೀಪಾ ಎಂಬ ಸಸ್ಯದ ಲಶುನ. ಇದನ್ನು ವಿಶೇಷವಾಗಿ ಆಹಾರಕ್ಕೂ ಕೆಲವು ಔಷಧಿಗಳಿಗೂ ಬಳಸಲಾಗುತ್ತದೆ. ಸಸ್ಯದ ಕೆಳಭಾಗದಲ್ಲಿ ಹಲವಾರು ಲಶುನಗಳ ಗೆಡ್ಡೆಯಿದ್ದು ಮೇಲ್ಬಾಗದಲ್ಲಿ ನೀಳ ಹಾಗೂ ಕೊಳವೆಯಾಕಾರದ ಹಸಿರೆಲೆಗಳಿವೆ. ಕಾಂಡದ ಭಾಗ ಬಹಳ ಕ್ಷೀಣಿಸಿದ್ದು, ಒಂದು ಚಿಕ್ಕ ತಟ್ಟೆಯಂತಿದೆ. ಅದರ ಸುತ್ತ ಹಾಗೂ ಮೇಲೆ ಅನೇಕ ರಕ್ಷಕ ಪತ್ರಗಳು ಇವೆ. ಈ ಸಸ್ಯಮೂಲಿಕೆಯನ್ನು ಒಂದು ವಾಣಿಜ್ಯ ಬೆಳೆಯಾಗಿ ಭಾರತದಲ್ಲಿ ಎಲ್ಲೆಡೆಯೂ ಬೆಳೆಸಲಾಗುತ್ತದೆ. ಲಶುನಗಳು ಉದ್ದೀಪಕಗಳೂ ಮೂತ್ರವರ್ಧಕಗಳೂ ಕಫ ಕತ್ತರಿಸುವಂಥವುಗಳೂ ಕಾಮೋದ್ದೀಪಕಗಳೂ ಆಗಿರುವಂತೆ ವಿಶಿಷ್ಟ ಪರಿಹಾರಗುಣಗಳನ್ನೂ ಹೊಂದಿವೆ. ಅದರಲ್ಲಿ ಭಾಷ್ಪೀಭವನವಾಗುವ ಒಂದು ಬಗೆಯ ಎಣ್ಣೆ ಇದ್ದು ಅದು ಕಾಮಾಲೆ, ಮೂಲವ್ಯಾಧಿ, ಜ್ವರ, ಕೆಮ್ಮು ಮತ್ತು ಉದರಶೂಲೆ ಇತ್ಯಾದಿಗಳಿಗೆ ಸಿದ್ಧೌಷಧವೆಂದು ಬಳಕೆಯಾಗುತ್ತದೆ. ಗೆಡ್ಡೆಯನ್ನು ಜಜ್ಜಿ ಹೊರತೆಗೆದ ರಸವನ್ನು ಕೆಲವು ಚರ್ಮರೋಗಗಳಿಗೆ ಲೇಪನದಂತೆ ಉಪಯೋಗಿಸುವು ದುಂಟು. ರಸವನ್ನು ಕಾಯಿಸಿ ಕಿವಿಯಲ್ಲಿ ಹಾಕಿದರೆ ಕಿವಿನೋವು ಶಮನವಾಗುತ್ತದೆ.
 ಬೆಳ್ಳುಳ್ಳಿ : ಇದು ಲಿಲಿಯೇಸಿ ಕುಟುಂಬದ ಅಲ್ಲಯಂ ಸೇಟಿವಮ್ ಎಂಬ ಸಸ್ಯದಿಂದ ದೊರೆಯುತ್ತದೆ. ಸಸ್ಯ ವಿಶಿಷ್ಟ ಹಾಗೂ ತೀವ್ರವಾಸನೆಯುಳ್ಳದ್ದಾಗಿ ಲಶುನಗಳಿಂದಾದ ಈರುಳ್ಳಿ ಗಡ್ಡೆಯಂತೆಯೇ ಒಂದು ಮೂಲಿಕೆಯಾಗಿ ಬೆಳೆಯುತ್ತದೆ. ಲಶುನದಿಂದ ಇಲಕುಗಳನ್ನು ಬೇರ್ಪಡಿಸಿ ಅಡುಗೆ ಮತ್ತು ಆಹಾರಗಳಲ್ಲಿ ರುಚಿ ಮತ್ತು ವಾಸನೆಗಾಗಿಯೂ ಕೆಲವು ಔಷಧಗಳ ತಯಾರಿಕೆಗೂ ಬಳಸುವುದುಂಟು. ಇದನ್ನು ಭಾರತದಲ್ಲಿ ಎಲ್ಲ ಕಡೆಯೂ ಬೆಳೆಸುತ್ತಾರೆ. ಲಶುನಗಳನ್ನು ಉದ್ದೀಪಕ, ಮೂತ್ರವರ್ಧಕಗಳಾಗಿಯೂ ಅಜೀರ್ಣಸಂಬಂಧದ ದೋಷಗಳು ಮತ್ತು ಜಠರಶೋಲೆ, ಜ್ವರ, ಕೆಮ್ಮು, ಚಿತ್ತೋದ್ರೇಕಗಳ ಶಮನಕ್ಕೂ ಕಾಮ ಮತ್ತು ಹಸಿವಿನ ಉದ್ದೀಪನಕ್ಕೂ ಸಿದ್ಧೌಷದವಾಗಿ ಬಳಸಲಾಗುತ್ತದೆ.
 ಚಿರೆಟ್ಟಾ : ಜೆನ್ಯಿಯನೇಸಿ ಕುಟುಂಬಕ್ಕೆ ಸೇರಿದ ಸ್ವರ್ಟಿಯ ಚಿರಾಟಾ ಎಂಬ ಇಡಿ ಸಸ್ಯವೇ ಔಷಧೀಯ ದೃಷ್ಟಿಯಿಂದ ಹೆಸರುವಾಸಿಯಾಗಿದ್ದರೂ ಅದರ ಬೇರಿಗೆ (ಚಿರೆಟ್ಟಾ) ವಿಶೇಷ ಮಹತ್ತ್ವವಿದೆ. ಈ ಸಸ್ಯಗಳು ಕಾಡಿನಲ್ಲಿ ಬೆಳೆಯುತ್ತಿದ್ದು ನೇಪಾಲ, ಭೂತಾನ, ಕಾಶ್ಮೀರ ಮತ್ತು ಹಿಮಾಲಯ ಪ್ರದೇಶಗಳಲ್ಲಿ 4-5 ಸಾವಿರ ಅಡಿಗಳ ಎತ್ತರದಲ್ಲೂ ಸಿಕ್ಕಿವೆ. ಬೇರಿನಲ್ಲಿ ಒಫೀಲಿಕ್ ಆಮ್ಲ ಮತ್ತು ಚಿರಾಟಿನ್ ಎಂಬ ವಿಶಿಷ್ಟ ಘಟಕಗಳಿವೆ. ಅವು ವಿರೇಚಕ ಗಳೂ ಹೌದು, ಜಠರ ಸಂಬಂಧದ ದೋಷಗಳಿಗೂ ಪರಿಣಾಮಕಾರಿ. ಅವುಗಳನ್ನು ಅಜೀರ್ಣ, ಓಕರಿಕೆ ಮತ್ತು ಯುಕೃತ್ತು ಹಾಗೂ ಪ್ಲೀಹ ದೋಷಗಳಿಗೆ ಔಷಧಗಳಂತೆ ಬಳಸುವುದುಂಟು.
 ಸೆನೆಗಾ : ಇದು ಪಾಲಿಗೆಲೇಸಿ ಕುಟುಂಬಕ್ಕೆ ಸೇರಿದ ಪಾಲಿಗೆಲ ಸೆನೆಗಾ ಎಂಬ ಸಸ್ಯದ ಒಣಗಿದ ಬೇರಿನಿಂದ ದೊರೆಯುತ್ತದೆ. ಇದರಲ್ಲಿ ಗ್ಲೂಕೊಸೈಡ್ ಎಂಬ ಘಟಕವಿದ್ದು ಅದನ್ನು ಹಾವಿನ ಕಡಿತಕ್ಕೂ ಉದ್ದೀಪಕವಾಗಿಯೂ ಕಫ ಕತ್ತರಿಸುವುದಕ್ಕೂ ವಾಂತಿಕಾರಕ ಔಷಧವಾಗಿಯೂ ಬಳಸಲಾಗುತ್ತದೆ. 
  ರಾವುಲ್ಫಿಯ (ಸೂತ್ರನಾಭಿ, ಪಾತಾಳಗರುಡ) : ಇದು ಅಪೊಸೈನೇಸೀ ಕುಟುಂಬಕ್ಕೆ ಸೇರಿದ ರಾವುಲ್ಫಿಯ ಸರ್ಪೆಂಟಿನ ಎಂಬ ಪೊದರು ಸಸ್ಯದ ಬೇರುಗಳಿಂದ ದೊರೆಯುತ್ತದೆ. ಇದು ಅಸ್ಸಾಂ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಶೇಷವಾಗಿ ಬೆಳೆಯುತ್ತದೆ. ಇದರಲ್ಲಿ ರಾವುಲ್ಫಿನ್ ಎಂಬ ಕ್ಷಾರೀಯ ಘಟಕವಿದ್ದು, ಇದು ಕೃತಕ ನಿದ್ರೆ ಬರಿಸುವಂಥ, ದುಗುಡ ಮನಸ್ಸನ್ನು ಶಾಂತಗೊಳಿಸುವಂಥ ವಸ್ತುವಾಗಿದೆ. ಹೀಗಾಗಿ ಇದನ್ನು ರಕ್ತದ ಅಧಿಕ ಒತ್ತಡ ಮತ್ತು ಮಾನಸಿಕ ಅಸಮತೋಲನ ಇತ್ಯಾದಿಗಳಿದ್ದ ರೋಗಿಗಳಿಗೆ ಕೊಡುವುದುಂಟು.
 ಇಪಿಕ್ಯಾಕ್ : ಇದು ಸಿಫ್ಯಾಲಿಸ್ ಇಪಿಕ್ಯಾಕ್ಯುವಾನ ಎಂಬ ಸಸ್ಯದ ಬೇರುಗಳಿಂದ ದೊರೆಯುವ ಔಷಧ. ಬೇರಿನ ಮೇಲೆ ಉಂಗುರ ಅಥವಾ ವಲಯಗಳಂಥ ಗುರುತುಗಳು ಇರುವುದು ಈ ಗಿಡದ ವೈಶಿಷ್ಟ್ಯ. ಬೇರಿನಲ್ಲಿ 2-3% ರಷ್ಟು ಎಮೆಟಿನ್ ಎಂಬ ವಾಂತಿಕಾರಕ ಹಾಗೂ ಕ್ಷಾರೀಯ ಘಟಕವಿದೆ. ಬೇರನ್ನು ನುಣ್ಣಗೆ ಪುಡಿಮಾಡಿ ಔಷಧ ರೂಪದಲ್ಲಿ ಅಮೀಬಾಗಳಿಂದಾದ ಆಮಶಂಕೆ ರಕ್ತದ ಅಧಿಕ ಒತ್ತಡ, ಜಠರ ರಸದ ಉತ್ಪಾದನೆಯನ್ನು ನಿಯಂತ್ರಿಸುವಿಕೆ ಇತ್ಯಾದಿಗಳಿಗೆ ಬಳಸುವುದುಂಟು.
  ವ್ಯಾಲೇರಿಯನ್ : ಇದಕ್ಕೆ ಹಿಂದೂಸ್ತಾನಿಯಲ್ಲಿ ಸೋಮರಾಜ್ ಎಂದು ಹೇಳುವುದುಂಟು. ಇದು ಕಂಪಾಸಿಟೆ ಕುಟುಂಬಕ್ಕೆ ಸೇರಿದ ವರ್ನೊನಿಯ ಎಂಬ ವಾರ್ಷಿಕ ಸಸ್ಯದ ಮೂಲಿಕೆಯ ಬೇರುಗಳಿಂದ ದೊರೆಯುತ್ತದೆ. ಈ ಔಷಧವನ್ನು ಕೆಮ್ಮು, ಬಿಳಿತೊನ್ನು, ಜಂತುಹುಳು, ಬೊಜ್ಜು, ಜಲೋದರ ಇತ್ಯಾದಿಗಳಿಗೆ ಬಳಸುವುದುಂಟು.
 ತೊಗಟೆಯಿಂದ ದೊರೆಯುವ ಔಷಧಗಳು  
  ಕ್ವಿನೀನು : ಇದು ಭಾರತದಲ್ಲಿ ವಿಶೇಷ ಬಳಕೆಯಲ್ಲಿರುವ ಔಷಧಗಳಲ್ಲಿ ಒಂದೆನ್ನಬಹುದು. ರೂಬಿಯೀಸಿ ಎಂಬ ಕುಟುಂಬಕ್ಕೆ ಸೇರಿದ ಸಿಂಕೋನ ಜಾತಿಯ ವಿವಿಧ ಪ್ರಭೇದಗಳಾದ ಸಿಂಕೋನ ಕ್ಯಾಲಿಸಾಯ, ಸಿಂಕೋನ ಅಫಿಷಿನಾಲಿಸ್, ಸಿಂಕೋನ ಲೆಡ್ಜೇರಿಯಾನ ಇತ್ಯಾದಿ ಸಸ್ಯಗಳ ತೊಗಟೆಗಳಿಂದ ಕ್ವಿನೀನನ್ನು ತಯಾರಿಸಲಾಗುತ್ತದೆ. ಇದರ ಮೂಲಸ್ಥಾನ ದಕ್ಷಿಣ ಅಮೆರಿಕ. ಇದು ಎತ್ತರ ಹಾಗೂ ಸುಂದರವಾಗಿ ಬೆಳೆಯುವ ಒಂದು ಮರ. 1638 ರಲ್ಲಿ ಮೊಟ್ಟಮೊದಲು ಬಳಕೆಗೆ ಬಂದ ಇದು ಮಲೇರಿಯ ರೋಗಕ್ಕೆ ರಾಮಬಾಣವೆನಿಸಿಕೊಂಡಿದೆ. ಕೆಲವು ಬಗೆಯ ಜ್ವರಗಳಿಗೂ ಇದು ಸಿದ್ಧೌಷಧವೇ ಟಾನಿಕ್, ಪುತಿನಾಶಕ ಇತ್ಯಾದಿಗಳ ರೂಪದಲ್ಲಿಯೂ ಇದರ ಬಳಕೆ ಇದೆ. ಮರ 12 ವರ್ಷಗಳ ವರೆಗೆ ಬೆಳೆದ ಮೇಲೆ ಅದನ್ನು ಕಡಿದು ಕಾಂಡ ಮತ್ತು ಬೇರುಗಳ ಮೇಲಿರುವ ತೊಗಟೆಯನ್ನು ಬೇರ್ಪಡಿಸಲಾಗುತ್ತದೆ. ಈ ತೊಗಟೆಯಲ್ಲಿ ಸುಮಾರು 30 ಬಗೆಯ ಕ್ಷಾರೀಯ ಘಟಕಗಳಿದ್ದು ಅವು ಕ್ವಿನೀನ್ ಎಂಬ ಹೆಸರಿನಲ್ಲಿ ಔಷಧೀಯ ದೃಷ್ಟಿಯಿಂದ ಮಹತ್ತ್ವದವಾಗಿವೆ. ಕ್ವಿನೀನ್ ಎಂಬುದು ಬಿಳಿ ರವೆಯ ಕಣಗಳಂತಿದೆ. ಇದು ಬಹು ಕಹಿವಸ್ತು. ಬ್ರಿಟನ್ ಮತ್ತ ನೆದರ್ಲೆಂಡ್ಸಿನಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇದು ರಫ್ತಾಗುತ್ತಿತ್ತು. ಈಗಲೂ ಜಗತ್ತಿನ ಪುರೈಕೆಯಲ್ಲಿ 90%ರಷ್ಟು ನೆದರ್ಲೆಂಡ್ಸಿನಿಂದಲೇ ಬರುತ್ತದೆ.
 ದಾಲಚಿನ್ನಿ ಅಥವಾ ಚಕ್ಕೆ (ಸಿನ್ನಮಾನ್) : ಲಾರೇಸಿ ಕುಟುಂಬಕ್ಕೆ ಸೇರಿದ ಸಿನಮೋಮಮ್ ಜಿûಲಾನಿಕಂ ಎಂಬ ಮರದಿಂದ ದೊರೆಯುವ ಚಕ್ಕೆ ಅಥವಾ ತೊಗಟೆಯೇ ದಾಲಚಿನ್ನಿ. ಇದಕ್ಕೆ ತೀಕ್ಷ್ಣವೂ ವಿಶಿಷ್ಟವೂ ಆದ ವಾಸನೆ ಇದೆ. ರುಚಿ ಒಗಚುಳ್ಳ ಸಿಹಿ, ಇದು ವಾತಹರ, ಇದನ್ನು ಅತಿಸಾರ ಮತ್ತು ಆಮಶಂಕೆಗಳಿಗೆ ಶಮನಕಾರಿಯಾಗಿ ಕಷಾಯ ರೂಪದಲ್ಲಿ ಬಳಸುವುದುಂಟು.
 ಕ್ಯಾಷಿಯ ತೊಗಟೆ : ಇದೂ ಲಾರೇಸಿ ಕುಟುಂಬಕ್ಕೆ ಸೇರಿದ ಸಿನಮೋಮಮ್ ತಮಲಾ ಎಂಬ ಸಸ್ಯದಿಂದ ದೊರೆಯುವ ತೊಗಟೆ. ಈ ಸಸ್ಯಗಳು ಬಂಗಾಳ ಮತ್ತು ಖಾಸಿ ಗುಡ್ಡ ಗಳಲ್ಲಿ ಸಾಮಾನ್ಯ. ಔಷಧ ಮತ್ತು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಇವುಗಳ ಬಳಕೆ ಹೆಚ್ಚು.
 ಆಲದ ಮರದ ಚಕ್ಕೆ : ಮೊರೇಸಿ ಕುಟುಂಬಕ್ಕೆ ಸೇರಿದ ಫೈಕಸ್ ಬೆಂಗಲೆನ್ಸಿಸ್ ಎಂಬ ಮರದ ತೊಗಟೆ. ತೊಗಟೆ ಅಥವಾ ಚಕ್ಕೆಯ ರಸವನ್ನು ನೀರಿನಲ್ಲಿ ಕೂಡಿಸಿ ಮಧುಮೇಹ ರೋಗಕ್ಕೆ ಮತ್ತು ಲ್ಯುಕೋರಿಯ ಅಥವಾ ಶ್ವೇತಪ್ರದರವೆಂಬ ಸ್ತ್ರೀರೋಗಗಳಿಗೆ ಔಷಧವಾಗಿ ಬಳಸುವುದುಂಟು.
 ಬಿಳಿಸೆ ಅಥವಾ ಬಾಹಿನಿಯ : ಲೆಗ್ಯುಮಿನೋಸಿ ಕುಟುಂಬಕ್ಕೆ ಸೇರಿದ ಬಾಹಿನಿಯ ವೇರಿಗೇಟ ಎಂಬ ಸಸ್ಯದ ತೊಗಟೆ ಅಥವಾ ಜಕ್ಕೆಗೆ ಮಹತ್ತ್ವವಿದೆ. ತೊಗಟೆಯ ಕಷಾಯವನ್ನು ಕೆಲವು ರೋಗಗಳಿಗೆ (ಉದಾ: ಸಿಫಿಲಿಸ್, ತೊನ್ನು, ವ್ರಣ ಮತ್ತು ಚರ್ಮರೋಗ) ಔಷಧವಾಗಿ ಹೊಟ್ಟೆಗೆ ತೆಗೆದುಕೊಳ್ಳುವುದುಂಟು. ಈ ಸಸ್ಯಗಳು ಅಸ್ಸಾಂ, ಮಧ್ಯಪ್ರದೇಶ, ಸಿಕ್ಕಿಂ, ಭೂತಾನ್ ಇತ್ಯಾದಿ ಪ್ರದೇಶಗಳಲ್ಲಿ ಬೆಳೆಯುತ್ತವೆ. 
 ಸಪ್ತವರ್ಣ : ಇದು ಅಪೊಸೈನೇಸಿ ಕುಟುಂಬಕ್ಕೆ ಸೇರಿದ ಆಲ್ಸ್ಟೋನಿಯ ಸ್ಕೊಲಾರಿಸ್ ಎಂಬ ಎತ್ತರವಾಗಿ ಬೆಳೆಯುವ ಹಾಗೂ ನಿತ್ಯಹರಿದ್ವರ್ಣದ ಮರ. ಇದು ಜವುಗು ಮತ್ತು ತಂಪು ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದರ ತೊಗಟೆಯನ್ನು ದೀರ್ಘಕಾಲದ ಆಮಶಂಕೆಗೆ ಬಳಸಲಾಗುತ್ತದೆ. ಯುದ್ಧಕಾಲದಲ್ಲಿ ಇದು ಕ್ವಿನೀನಿಗೆ ಬದಲಿ ವಸ್ತುವಾಗಿ ಬಳಕೆಯಾಗುತ್ತಿತ್ತು. ಇದಕ್ಕೆ ಜಂತಾಲ ಮರ, ಮದ್ದಾಲೆ, ಏಳೆಲೆಬಾಳೆ, ಕೋಡಾಲೆ, ಬಂತನೆ ಎಂಬ ಇತರ ಹೆಸರುಗಳಿವೆ.
  ಅಶೋಕ ಮರದ ಚಕ್ಕೆ : ಈ ಗಿಡ ಲೆಗ್ಯುಮಿನೋಸಿ ಕುಟುಂಬಕ್ಕೆ ಸೇರಿದ ಸರಕ ಇಂಡಿಕ ಎಂಬ ಹೆಸರಿನ, ನಿತ್ಯಹರಿದ್ವರ್ಣದ ಎತ್ತರ ಬೆಳೆಯುವ ಮರ. ಇದನ್ನು ಎಲ್ಲೆಡೆಯಲ್ಲೂ ಅಲಂಕಾರ ಸಸ್ಯವಾಗಿ ಬೆಳೆಸುವುದುಂಟು. ಇದಕ್ಕೆ ಕೆಂಕಾಳಿ, ಆಚಂಗೆ ಇತ್ಯಾದಿ ಹೆಸರುಗಳೂ ಉಂಟು. ತೊಗಟೆ ಒಗರಾಗಿದ್ದು ಗರ್ಭಕೋಶದ ತೊಂದರೆಗಳಿಗೆ ಪರಿಣಾಮಕಾರಿಯಾಗಿದೆ. 
 ಕ್ಯಾಸ್ಕಾರಾ : ಇದು ರ್ಯಾಮ್ನೇಸಿ ಕುಟುಂಬಕ್ಕೆ ಸೇರಿದ ರ್ಯಾಮ್ನಸ್ ಪುರ್ಷಿಯಾನಾ ಎಂಬ ಮರದ ತೊಗಟೆಯಿಂದ ದೊರೆಯುವ ಔಷಧ. ಉದ್ದನೆಯ ಪಟ್ಟಿಯಂತಿರುವ ಈ ತೊಗಟೆಯನ್ನು ಒಣಗಿಸಿ, ಒಂದು ವರ್ಷ ಕಾಲ ಇಟ್ಟ ಮೇಲೆ ಔಷಧವಾಗಿ ಉಪಯೋಗಕ್ಕೆ ಬರುತ್ತದೆ. ಇದನ್ನು ಶಕ್ತಿವರ್ಧಕ ಮತ್ತು ರೇಚಕವಾಗಿಯೂ ಬಳಸುವುದುಂಟು.
 ಬಾರಿ ಅಥವಾ ಎಲಚಿ : ಇದು ರ್ಯಾಮ್ನೇಸಿ ಕುಟುಂಬದ ಜಿûಜಿûಫಸ್ ಜುಜೂಬ ಎಂಬ ಮರ.  ಇದರ ತೊಗಡೆಯನ್ನು ಆಮಶಂಕೆ, ಅತಿಸಾರ, ಕರುಳು ಬೇನೆ, ವಸಡು ನೋವು ಇತ್ಯಾದಿಗಳಿಗೆ ಬಳಸುವುದುಂಟು.
 ಚೆಳ್ಳೆಮರ : ಇದು ಬೊರ್ಯಾಜಿನೇಸಿ ಕುಟುಂಬಕ್ಕೆ ಸೇರಿದ ಕಾರ್ಡಿಯ ಡೈಕಾಟೊಮಾ ಎಂಬ ಮರ. ಇದರ ತೊಗಡೆಯ ರಸವನ್ನು ಹಾಲಿನಲ್ಲಿ ಕೂಡಿಸಿ, ಶಕ್ತಿವರ್ಧಕವಾಗಿಯೂ ಕರುಳುಬೇನೆಗಳಿಗೆ ಶಮನಕಾರಿಯಾಗಿಯೂ ಬಳಸುವುದುಂಟು. 
 ಕಾಂಡದಿಂದ ದೊರೆಯುವ ಔಷಧಗಳು  
  ಎಫಿಡ್ರಿನ್ : ಇದನ್ನು ಅನಾವೃತ ಬೀಜ ಸಸ್ಯಗಳ ಗುಂಪಿಗೆ ಸೇರಿದ ಎಫಿಡ್ರ ಎಂಬ ಜಾತಿಯ ವಿವಿಧ ಪ್ರಭೇಧಗಳಿಂದ ಉತ್ಪಾದಿಸಲಾಗುತ್ತದೆ. ಸಸ್ಯ ಎಲೆಯೋ ಇಲ್ಲದ ಹಸಿರು ಬಣ್ಣದ ಕಂಟಿಯಂತಿದೆ ಎಫಿಡ್ರಿನ್ ಎಂಬ ಕ್ಷಾರೀಯ ಘಟಕವುಳ್ಳ ಈ ಔಷಧವನ್ನು ಶೀತ, ದಮ್ಮು, ಜ್ವರ ಇತ್ಯಾದಿಗಳಿಗೆ ಬಳಸುವುದುಂಟು.
 ಬಿಳಿ ಗಂಧದ ಮರ (ಸ್ಯಾಂಡಲ್ವುಡ್) : ಇದು ಸ್ಯಾಂಟಲೇಸಿ ಕುಟುಂಬಕ್ಕೆ ಸೇರಿದ ಸ್ಯಾಂಟಲಂ ಆಲ್ಬಂ ಎಂಬ ಹೆಸರಿನ ಮರ. ಇದಕ್ಕೆ ಗಂಧದ ಮರ ಅಥವಾ ಚಂದನತರು ಎಂದೂ ಹೆಸರಿದೆ. ಮರದ ಕಾಂಡ ಮತ್ತು ಅದರಿಂದ ತೆಗೆದೆಣ್ಣೆ ಎರಡೂ ಔಷಧೋಪಯೋಗಿ ವಸ್ತುಗಳು. ಅವು ಸುಗಂಧ ವಾಸನೆಯುಳ್ಳವು ತಂಪು ಮತ್ತು ಶಮನಕಾರಿಗಳು. ಕಟ್ಟಿಗೆಪುಡಿಯನ್ನು ಗನೋರಿಯ ಮತ್ತು ಜ್ವರಗಳಿಗೆ ಔಷಧವಾಗಿ ಬಳಸುತ್ತಾರೆ. ಗಂಧವನ್ನು ತೇಯ್ದು ಬಾಹ್ಯ ಲೇಪನವಾಗಿ ಕುರು, ಹುಣ್ಣು, ಹುರುಪೆ ಇತ್ಯಾದಿ ಚರ್ಮರೋಗಗಳಿಗೆ ಹಚ್ಚುತ್ತಾರೆ. ಗಂಧದ ಎಣ್ಣೆಯನ್ನು ಅನ್ನ ಮತ್ತು ಜೇನುತುಪ್ಪದೊಡನೆ ಕೂಡಿಸಿ ಸೇವಿಸಿದಾಗ ಮಿತಿಮೀರಿದ ನೀರಡಿಕೆ ಮತ್ತು ಆಮಶಂಕೆ ನಿವಾರಣಿಯಾಗುತ್ತದೆ.
 ಕೆಂಪು ಗಂಧದ ಮರ : ಇದು ಲೆಗ್ಯುಮಿನೋಸಿ ಕುಟುಂಬಕ್ಕೆ ಸೇರಿದ ಟೀರೋಕಾರ್ಪಸ್ ಸ್ಯಾಂಟಲಿನಸ್ ಎಂಬ ಮರದಿಂದ ಕೆಂಪು ಅಥವಾ ರಕ್ತಚಂದನ ಕಟ್ಟಿಗೆಯಾಗಿ ದೊರೆಯುತ್ತದೆ. ಇದಕ್ಕೆ ಬಿಳಿ ಗಂಧದ ಕಟ್ಟಿಗೆಯಂತೆಯೇ ಕೆಲವು ಔಷಧೀಯ ಗುಣಗಳಿವೆ. ಕಟ್ಟಿಗೆಯನ್ನು ತೇಯ್ದು, ಕಣ್ಣುಬೇನೆಗಳಿಗೆ ಹಚ್ಚುವುದುಂಟು.
 ಎಕ್ಕದ ಗಿಡ : ಇದು ಆಸ್ಕ್ಲಿಪಿಯಡೇಸಿ ಕುಟುಂಬದ ಕ್ಯಾಲೊಟ್ರೊಪಿಸ್ ಪ್ರೊಸಿರ ಎಂಬ ಚಿಕ್ಕ ಗಿಡ. ಇದರಿಂದ ದೊರೆಯುವ ಬಿಳಿದ್ರವದಿಂದ (ಲ್ಯಾಟೆಕ್ಸ್‌) ಸಂಧಿವಾತ, ತೊನ್ನು, ಜಲೋದರ, ಟೈಫಸ್ ಜ್ವರ, ಸಿಫಿಲಿಸ್, ಹುಳುಕಡ್ಡಿ, ಗಜಕರ್ಣ, ಹಲ್ಲುನೋವು ಇತ್ಯಾದಿಗಳ ನಿವಾರಣಿಯಾಗುತ್ತದೆ. ಒಣಗಿಸಿದ ಬಿಳಿದ್ರವ ಕಫಹಾರಿಯಾಗಿದ್ದು, ನರಗಳಿಗೆ ಉತ್ತಮ ಶಕ್ತಿವರ್ಧಕ ಕೂಡ ಆಗಿದೆಯೆಂದು ಭಾವಿಸಲಾಗಿದೆ.
 ಬಿದಿರು : ಇದು ಗ್ರ್ಯಾಮಿನಿ ಕುಟುಂಬಕ್ಕೆ ಸೇರಿದ ಬ್ಯಾಂಬುಸಾ ಬ್ಯಾಂಬಾಸ್ ಎಂಬ ಮರ ಅಥವಾ ಮೆಳೆ. ಕಾಂಡದ ತಿರುಳಿಗೆ ಅನೇಕ ಔಷಧೀಯ ಗುಣಗಳಿವೆ. ಎಳೆಯ ಕಾಂಡದಲ್ಲಿ ಬೆಂಜೊ಼ಯಿಕ್ ಮತ್ತು ಹೈಡ್ರೊಸಯನಿಕ್ ಆಮ್ಲಗಳಿದ್ದು, ಶ್ವಾಸಸಂಬಂಧದ ರೋಗಗಳಿಗೆ ಪರಿಣಾಮಕಾರಿಯೆನಿಸಿದೆ. ನೀರಿನಲ್ಲಿ ಕುದಿಸಿದ ಎಳೆಯ ಕಾಂಡಗಳು ಗಾಯಗಳನ್ನು ತೊಳೆಯಲು ಉಪಯುಕ್ತ. ಕಾಂಡದ ಗಂಟುಗಳಿಂದ ತೆಗೆದ ಕಷಾಯ ಎಲುಬು ಸಂಧಿಗಳ ಬಾವನ್ನು ಶಮನಗೊಳಿಸುತ್ತದೆ. 
 ಪಾಪಾಸು (ಡಬ್ಬು) ಕಳ್ಳಿ : ಹಸಿರು ಹಾಗೂ ಚಪ್ಪಟೆಯಾದ ಈ ಪಾಪಾಸು ಕಳ್ಳಿಯಲ್ಲಿ ಇರುವ ಲೋಳೆಯಂಥ ದ್ರವಕ್ಕೆ (ಮ್ಯೂಸಿಲೇಜ್) ವಿಶೇಷ ಔಷಧೀಯ ಗುಣವುಂಟು. ಅದನ್ನು ಬಿಸಿಮಾಡಿ ಬೆಚ್ಚಾರದಂತೆ ಉಪಯೋಗಿಸಿದರೆ ಕುರು, ಹುಣ್ಣು, ಬಾವು ಇತ್ಯಾದಿ ಶಮನಗೊಳ್ಳುತ್ತವೆ.

 ಎಲೆಗಳಿಂದ ದೊರೆಯುವ ಔಷಧಗಳು  
 ಬೇವು (ನೀಮ್) : ಮೀಲಿಯೇಸಿ ಎಂಬ ಕುಟುಂಬಕ್ಕೆ ಸೇರಿದ ಅeóÁದಿರಕ್ತ ಇಂಡಿಕ ಎಂಬ ಹೆಸರಿನ ಮರಗಳ ಎಲೆಗಳ ಜೊತೆಗೆ ಕಾಂಡ, ತೊಗಟೆ ಮತ್ತು ಫಲಗಳೂ ಉಪಯುಕ್ತವೇ. ಇದು ಭಾರತದಲ್ಲಿ ಎಲ್ಲೆಡೆಯೂ ಬೆಳೆಯುವಂಥ ಮರ. (ನೋಡಿ- ಬೇವು).
 ಬೆಲ್ಲಡೋನಾ : ಇದು ಸೊಲನೇಸಿ ಕುಟುಂಬದ ಅಟ್ರೊಪಾ ಬೆಲ್ಲಡೋನಾ ಮತ್ತು ಆ. ಅಕ್ಯೂಮಿನೇಟಾ ಎಂಬ ಸಸ್ಯಗಳ ಒಣ ಎಲೆಗಳಿಂದ ದೊರೆಯುತ್ತದೆ. ಸಸ್ಯ ನೇರ ಹಾಗೂ ಎತ್ತರ ಬೆಳೆಯುವ ಮೂಲಿಕೆಯಾಗಿದ್ದು, ಅದನ್ನು ಭಾರತ, ಯುರೋಪ್ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಎಲ್ಲೆಡೆ ಬೆಳೆಸಲಾಗುತ್ತದೆ. ಹೂ ಬಿಡುವ ಕಾಲಕ್ಕೆ ಎಲೆಗಳನ್ನು ಕಿತ್ತು ಒಣಗಿಸುತ್ತಾರೆ. ಎಲೆಯಲ್ಲಿ ಹಯೊಸಯಾಮಿನ್ ಮತ್ತು ಅಟ್ರೊಪಿನ್ ಎಂಬ ಎರಡು ರಾಸಾಯನಿಕ ಘಟಕಗಳಿವೆ. ಎಲೆಗಳಿಂದ ತಯಾರಿಸಿದ ಔಷಧಗಳನ್ನು ಅಫೀಮು ಸೇವನಿಯಿಂದಾದ ವಿಷಪರಿಣಾಮವನ್ನು ನಿವಾರಿಸುವುದು, ಸ್ರಾವಕ ಗ್ರಂಥಗಳ ಕ್ರಿಯೆಗಳನ್ನು ನಿಯಂತ್ರಿಸುವುದು, ಬಾಹ್ಯಲೇಪನದಿಂದ ನೋವು ಕಡಿಮೆ ಮಾಡುವುದು, ಅಸ್ತಮ, ಉದರ ಶೂಲೆ, ಮೂತ್ರಕೋಶದ ದೋಷಗಳು, ಕಣ್ಣಿನ ಪರೀಕ್ಷೆ ನಡೆಸುವಾಗ ಕಣ್ಣಾಪೆಯನ್ನು ಹಿಗ್ಗಿಸುವುದು — ಇತ್ಯಾದಿ ಹಲವಾರು ಉದ್ದೇಶಗಳಿಗೆ ಬಳಸಲಾಗುತ್ತದೆ.
 ನೀರು ಬ್ರಾಹ್ಮಿ : ಇದು ಸ್ಕ್ರಾಫ್ಯುಲೇರಿಯೇಸಿ ಕುಟುಂಬಕ್ಕೆ ಸೇರಿದ ಬೆಕೋಪ ಮಾನಿಯೆರ ಇಂಬ ಸಸ್ಯದ ಎಲೆಗಳಿಂದ ದೊರೆಯುತ್ತದೆ. ಸಸ್ಯ ಭೂಮಿಗೆ ಹತ್ತಿದಂತೆ ಅಡ್ಡಡ್ಡಲಾಗಿ ಬೆಳೆಯುವ ಮೂಲಿಕೆಯಾಗಿದ್ದು ಗಿಣ್ಣುಗಳಿಂದ ಆಗಂತುಕ ಬೇರುಗಳನ್ನು ಉತ್ಪಾದಿಸುತ್ತದೆ. ಮಳೆ ಹಾಗೂ ಚಳಿಗಾಲಗಳಲ್ಲಿ ಮಾತ್ರ ಈ ಸಸ್ಯ ಕಾಣಿಸಿಕೊಳ್ಳುತ್ತದೆ. ಎಲೆಯ ರಸವನ್ನು ಶ್ವಾಸನಾಳದ ದೋಷಗಳು, ಅತಿಸಾರ, ನೆಗಡಿ ಇತ್ಯಾದಿಗಳಿಗೆ ಬಳಸುವುದುಂಟು.
 ನೀಲಗಿರಿ ಎಣ್ಣೆ : ಮಿರ್ಟೇಸಿ ಕುಟುಂಬಕ್ಕೆ ಸೇರಿದ ಯೂಕಲಿಪ್ಟಸ್ ಜಾತಿಯ ಸಸ್ಯಗಳಿಂದ ತೆಗೆದ ಒಂದು ಸಾರತೈಲ. ಔಷಧೀಯ ದೃಷ್ಟಿಯಿಂದ ಮಹತ್ತ್ವದ್ದಾಗಿದೆ. ಭಾರತದಲ್ಲಿ ಹಲವಾರು ಪ್ರಭೇದದ ನೀಲಗಿರಿ ತೈಲದ ಮರಗಳನ್ನು ಬೆಳೆಸಲಾಗುತ್ತಿದೆ. ಇದರ ಸಾರತೈಲ ಪುತಿನಾಶಕವಾಗಿದ್ದು, ಸಂಧಿವಾತ, ಅಸ್ತಮ ಮತ್ತು ಶ್ವಾಸನಾಳ ವಿಕಾರಗಳು, ಮೂಗು ಗಂಟಲು ಬೇನೆಗಳು ಇತ್ಯಾದಿಗಳಿಗೂ ಸುಟ್ಟ ಗಾಯಗಳಿಗೆ ಲೇಪನ ರೂಪದಲ್ಲಿಯೂ ಬಳಕೆಯಲ್ಲಿದೆ.
 ಉಮ್ಮತ್ತಿ : ಸೊಲನೇಸಿ ಕುಟುಂಬಕ್ಕೆ ಸೇರಿದ ಈ ದತ್ತೂರ ಸ್ಟ್ರಮೋನಿಯಮ್ ಎಂಬ ಸಸ್ಯದಿಂದ ವಾಣಿಜ್ಯಮಹತ್ತ್ವದ ದತ್ತೂರ ದೊರೆಯುತ್ತದೆ. ಸಸ್ಯವೂ ದೊಡ್ಡ ಗಾತ್ರದ ಮೂಲಿಕೆಯಾಗಿದ್ದು, ದೊಡ್ಡ ದೊಡ್ಡ ಹೂಗಳನ್ನು ಬಿಡುತ್ತದೆ. ಅದು ಸಾಮಾನ್ಯವಾಗಿ ಎಲ್ಲೆಡೆ ಕಾಡುಗಿಡದಂತೆ (ವೀಡ್) ಬೆಳೆಯುತ್ತದೆ. ಎಲೆ ಮತ್ತು ಕಾಯಿಗಳು ಔಷಧ ದೃಷ್ಟಿಯಿಂದ ಮಹತ್ತ್ವದ್ದಾಗಿವೆ. ಎಲೆಗಳನ್ನು ಬಾಹ್ಯಲೇಪನಕ್ಕಾಗಿಯೂ ಮಾದಕ ವಸ್ತುವಿನಂತೆಯೂ ನೋವುಶಮನಕಾರಿಯಾಗಿಯೂ (ವೇದನಾಹರ) ಕಫ ಕತ್ತರಿಸುವುದಕ್ಕೂ ಬಳಸಲಾಗುತ್ತದೆ. ಅವುಗಳಲ್ಲಿ ಹಯೊಸಿನ್, ಹಯೊಸಯಾಮಿನ್ ಮತ್ತು ಅಟ್ರೊಪಿನ್ ಎಂಬ ರಾಸಾಯನಿಕ ಘಟಕಗಳಿವೆ. ಅವುಗಳ ಬಳಕೆ ಅಸ್ತಮ ರೋಗದಲ್ಲಿ ವಿಶೇಷ. ಎಲೆಗಳಿಂದ ತಯಾರಿಸಿದ ಬೆಚ್ಚಾರ ಸಂಧಿವಾತ, ಬಾತು ನೋವುಂಟುಮಾಡುವ ಗೆಡ್ಡೆ, ಸಿಡುಬು, ದಡಾರ ಇತ್ಯಾದಿಗಳಿಗೆ ಪರಿಣಾಮಕಾರಿ, ಫಲಗಳು ಅಜೀರ್ಣ, ಉದರಶೂಲೆ, ಅಸ್ತಮ, ಧನುರ್ವಾತ (ಟಿಟಾನಸ್), ಬೆನ್ನುಫಣಿ ಇತ್ಯಾದಿಗಳಿಗೆ ಸಿದ್ಧೌಷಧ. 
 ಡಿಜಿಟ್ಯಾಲಿಸ್ : ಸ್ಕ್ರಾಫ್ಯುಲೇರಿಯೇಸಿ ಕುಟುಂಬಕ್ಕೆ ಸೇರಿದ ಡಿಜಿಟ್ಯಾಲಿಸ್ ಪಪುರ್ಯ್‌ರಿಯ ಎಂಬ ಈ ಮೂಲಿಕೆಯ ಎಲೆಗಳನ್ನು ಒಣಗಿಸಿ ಸಂಗ್ರಹಿಸಲಾಗುತ್ತದೆ. ಈ ಸಸ್ಯ ಯುರೋಪ್ ಖಂಡದಲ್ಲಿ ಬೆಳೆಯುವುದು ಹೆಚ್ಚು. ಇವು ಡಿಜಿಟ್ಯಾಕ್ಸಿನ್ ಎಂಬ ರಾಸಾಯನಿಕ ಘಟಕವಿದೆ. ಎಲೆಗಳಿಂದ ತಯಾರಿಸಿದ ಔಷಧಗಳು ಹೃದಯ ಕ್ರಿಯೆಯ ಪ್ರಚೋದಕಗಳು. ಇದರಿಂದ ಅನೇಕ ಬಗೆಯ ಹೃದ್ರೋಗಗಳಿಗೆ ಔಷಧ ತಯಾರಿಸುವರು.
 ಕೊಕೇನ್ : ಎರಿತ್ರೊಕ್ಸೈಲೇಸಿ ಕುಟುಂಬಕ್ಕೆ ಸೇರಿದ ಎರಿತ್ರೊಕ್ಸೈಲಾನ್ ಕೋಕೊ ಎಂಬ ಸಸ್ಯದಿಂದ ತಯಾರಾದ ಔಷಧ. ಇದನ್ನು ಶಸ್ತ್ರ ಚಿಕಿತ್ಸೆಯಲ್ಲಿ ಸ್ಥಳೀಯ ಅರಿವಳಿಕವಾಗಿ (ಲೋಕಲ್-ಅನೀಸ್ತೀಸಿಯ), ಬಳಸುವುದುಂಟು.
 ಗಾಂಜಾ (ಇಂಡಿಯನ್ ಹೆಂಪ್) : ಕ್ಯಾನಬೀಸಿ ಕುಟುಂಬಕ್ಕೆ ಸೇರಿದ ಕ್ಯಾನಬಿಸ್ ಸಟೈವ ಎಂಬ ಸಸ್ಯದ ಒಣಗಿದ ಎಲೆಗಳಿಗೆ ಗಾಂಜಾ ಅಥವಾ ಭಂಗಿ ಎಂದು ಹೇಳುವುದುಂಟು. ಈ ಎಲೆಗಳನ್ನು ಅರೆದು ನೀರಿನೊಡನೆ ಕೂಡಿಸಿ ಹೊಟ್ಟೆಗೆ ತೆಗೆದುಕೊಳ್ಳುವುದು ಹೆಚ್ಚು. ಅದರಿಂದ ಅರೆನಿಶೆಯುಂಟಾಗುತ್ತದೆ. ಸಸ್ಯ (5-6) ಅಡಿ ಎತ್ತರಕ್ಕೆ ಬೆಳೆಯುವ ಒಂದು ವಾರ್ಷಿಕ ಮೂಲಿಕೆ. ಉತ್ತರ ಭಾರತದಲ್ಲಿ ಅನೇಕ ಕಡೆ ಬೆಳೆಯುತ್ತದೆ. ಎಲೆಗಳಿಗೆ ಉಪಶಾಮಕ, ಪಚನಕ್ರಿಯೆ, ಚೋದಕ, ಮೂತ್ರವರ್ಧಕ ಗುಣಗಳಿವೆ. ಅದರಿಂದ ಇವುಗಳನ್ನು ಆಮಶಂಕೆ, ಅತಿಸಾರ ಅಜೀರ್ಣ ಮುಂತಾದ ದೋಷಗಳಿಗೆ ಬಳಸುವುದುಂಟು. ವೈದ್ಯಕೀಯ ದೃಷ್ಟಿಯಿಂದ ಸಸ್ಯದ ಕರಕು, ಗಾಂಜಾ ಇತ್ಯಾದಿಗಳು ಮಹತ್ತ್ವದವು.
 ತುಳಸಿ : ಲೇಬಿಯೇಟಿ ಕುಟುಂಬಕ್ಕೆ ಸೇರಿದ ಅಸಿಮಮ್ ಸ್ಯಾಂಕ್ಟಮ್ ಎಂಬ ಸಸ್ಯ; ಭಾರತೀಯರಿಗೆ ಪವಿತ್ರವಾದುದು. ಔಷಧೀಯ ದೃಷ್ಟಿಯಿಂದಲೂ ಮುಖ್ಯವಾಗಿದೆ. ಇದನ್ನು ಭಾರತದಲ್ಲಿ ಎಲ್ಲೆಡೆ ಹಿಂದೂ ಜನರು ಮನೆಗಳ ಆವರಣದಲ್ಲಿ ಬೆಳೆಸುತ್ತಾರೆ. ಎಲೆಗಳಿಗೆ ಹಸಿವು ವೃದ್ಧಿಮಾಡುವ, ಕಫ ಕತ್ತರಿಸುವ, ಉದ್ದೀಪಕ, ಸುವಾಸನೆಕೊಡುವ, ಶೀತಹರ ಇತ್ಯಾದಿ ಗುಣಗಳಿವೆ. ಎಲೆಗಳನ್ನು ಅರೆದು ಜೇನುತುಪ್ಪ ಮತ್ತು ಕರಿಮೆಣಸಿನೊಡನೆ ಕೂಡಿಸಿ ಚಳಿಜ್ವರ ಯಕೃತ್ತಿನ ವಿಕಾರಗಳು, ನೆಗಡಿ, ಕೆಮ್ಮು, ಗಂಟಲುಬೇನೆ ಇತ್ಯಾದಿಗಳಿಗೆ ಬಳಸುವುದುಂಟು. ಮಲೇರಿಯ ಜ್ವರಕ್ಕೆ ಮೆಣಸು, ಶುಂಠಿ ಮತ್ತು ತುಳಸಿ ಎಲೆಗಳನ್ನು ಕೂಡಿಸಿ ಕೊಡುವುದುಂಟು. ಆಮಶಂಕೆ, ವಾಂತಿ, ರಕ್ತಸ್ರಾವ ಇತ್ಯಾದಿಗಳನ್ನೂ ಅದು ಗುಣಪಡಿಸಬಲ್ಲದು.
 ವೀಳೆಯದೆಲೆ (ಬೀಟಲ್ಲೀಫ್) : ಪೈಪರೇಸಿ ಕುಟುಂಬಕ್ಕೆ ಸೇರಿದ ಪೈಪರ್ ಬೀಟಲ್ ಅಥವಾ ಬೀಟಲ್ ವೈನ್ ಎಂಬ ಬಳ್ಳಿಯ ಎಲೆಗಳಿಗೆ ವೀಳೆಯದೆಲೆ ಅಥವಾ ತಿನ್ನುವ ಎಲೆ ಎಂದೂ ಹೇಳಲಾಗುತ್ತದೆ. ಅವುಗಳಿಗೆ ವಾತಹರ, ಸುವಾಸನೆಕೊಡುವ ಮತ್ತು ಪ್ರಚೋದಕ ಗುಣಗಳಿವೆ. ಎಲೆಯ ರಸವನ್ನು ಜೇನುತುಪ್ಪದೊಡನೆ ಕೂಡಿಸಿ ಮಕ್ಕಳಿಗೆ ಹಲ್ಲು ಬರುವಾಗ ಕೊಡುವುದುಂಟು. ರಸವನ್ನು ಹಸಿ ಶುಂಠಿಯೊಡನೆ ಸೇವಿಸಿದಾಗ ಶ್ವಾಸನಾಳದ ದೋಷಗಳು, ನೆಗಡಿ, ಅಜೀರ್ಣ ಇತ್ಯಾದಿ ಮಾಯವಾಗುತ್ತವೆ. ರಸವನ್ನು ಕಣ್ಣಿಗೆ ಹಾಕಿಕೊಂಡರೆ ಇರುಳು ಕುರುಡು ಮತ್ತಿತರ ಕಣ್ಣಿನ ದೋಷಗಳು ಪರಿಹಾರವಾಗುವುವು. ಎಲೆಗೆ ಎಣ್ಣೆ ಸವರಿ ಬಿಸಿಮಾಡಿ ಕುರು, ಹುಣ್ಣುಗಳ ಮೇಲಿಟ್ಟು ಕಟ್ಟಿದರೆ, ಅವು ಮೆತ್ತಗಾಗಿ ಒಡೆಯುವಂತೆ ಮಾಡುತ್ತದೆ.
 ಸೆನ್ನ ಅಥವಾ ಸೋನಾಮುಖಿ : ಲೆಗ್ಯುಮಿನೋಸಿ ಕುಟುಂಬಕ್ಕೆ ಸೇರಿದ ಕ್ಯಾಷಿಯ ಆಕ್ಯುಟಿಫೋಲಿಯ ಮತ್ತು ಕ್ಯಾಷಿಯ ಅಂಗಸ್ಟಿಫೊಲಿಯ ಎಂಬ ಸಸ್ಯಗಳ ಸಣ್ಣೆಲೆಗಳು (ಪರ್ಣಿಕೆ) ಮತ್ತು ಕಾಯಿಗಳಿಂದ ಈ ಔಷಧವಸ್ತು ದೊರೆಯುತ್ತದೆ. ಇದು ಒಳ್ಳೆಯ ಪರಿಣಾಮಕಾರಿ ರೇಚಕ. ಇದನ್ನು ಭಾರತ, ಈಜಿಪ್ಟ್‌ ಮತ್ತು ಅರೇಬಿಯ ದೇಶಗಳಲ್ಲಿ ಹೆಚ್ಚಾಗಿ ಬೆಳೆಸಲಾಗುತ್ತದೆ. ಇದಕ್ಕೆ ಸಂಧಿವಾತ, ಶೋಣಿತವಾಯು, ಯಕೃತ್ತನ್ನು ಚುರುಕುಗೊಳಿಸುವುದು, ಕರುಳಿನ ಜಂತುಗಳನ್ನು ನಾಶಪಡಿಸುವುದು, ಮೊಡವೆ, ಕೆಲವು ಬಗೆಯ ಚರ್ಮರೋಗಗಳನ್ನು ಗುಣಪಡಿಸುವುದು ಇತ್ಯಾದಿ ಗುಣಗಳಿವೆ.
 ಮಲ್ಲಿಗೆ : ಓಲಿಯೇಸಿ ಕುಟುಂಬಕ್ಕೆ ಸೇರಿದ ಜಾಸ್ಮಿನಮ್ ಗ್ರಾಂಡಿಫ್ಲೋರಮ್, ಜಾ. ಅಫಿಷಿನೇಲ್ ಜಾತಿಯ ಈ ಸಸ್ಯ ಪ್ರಭೇದಗಳನ್ನು ಎಲ್ಲ ಕಡೆ ಹೂವಿಗಾಗಿ ಬೆಳೆಸುವರು. ಎಲೆಗಳು ಒಗರಾಗಿದ್ದು, ಅವುಗಳನ್ನು ಅಗೆದಾಗ ವಸಡು ಮತ್ತು ದಂತಸಂಬಂಧದ ನೋವು, ಬಾಯಿಹುಣ್ಣು ಇತ್ಯಾದಿಗಳು ಗುಣವಾಗುತ್ತದೆ. ಎಲೆಯನ್ನು ಅರೆದು ರಸ ಅಥವಾ ಸರಿಯನ್ನು ಕಲ್ಬೆರಳುಗಳ ನಡುವಿನ ಹುಣ್ಣು (ಕೆಸರುಹುಣ್ಣು) ಮತ್ತಿತರ ಬಗೆಯ ಸಣ್ಣಪುಟ್ಟ ವ್ರಣಗಳನ್ನು ಮಾಯಿಸಲು ಉಪಯೋಗಿಸುವರು.
 ಎಕ್ಲಿಪ್ಟ ಅಥವಾ ಗರುಗದ ಗಿಡ : ಕಂಪಾಸಿóಟಿ ಕುಟುಂಬಕ್ಕೆ ಸೇರಿದ ಎಕ್ಲಿಪ್ಟ ಆಲ್ಬ ಎಂಬ ಈ ಗಿಡಕ್ಕೆ, ಹಿಂದೂಸ್ತಾನಿಯಲ್ಲಿ ಭಿಂಗ್ರಾಜ ಎಂದು ಹೆಸರು. ಇದರ ಎಲೆಗಳನ್ನು ಚರ್ಮರೋಗಗಳು, ಕೆಮ್ಮು, ತಲೆಶೂಲೆ, ಯಕೃತ್ತು, ಮತ್ತು ಗರ್ಭಕೋಶದ ವಿಕಾರಗಳು ಹಾಗೂ ಕಾಮಾಲೆ ರೋಗಗಳಿಗೆ ಸಿದ್ಧೌಷಧವೆಂದು ಬಳಸುವುದುಂಟು.
 ಸೀಮೆ ಅಗಸೆ : ಲೆಗ್ಯುಮಿನೋಸಿ ಕುಟುಂಬಕ್ಕೆ ಸೇರಿದ ಕ್ಯಾಷಿಯ ಅಲಾಟಾ ಎಂಬ ಸಸ್ಯ ದೊಡ್ಡ ಕಂಟಿಯಾಗಿದ್ದು ಭಾರತದಲ್ಲಿ ಎಲ್ಲೆಡೆ ಬೆಳೆಯುತ್ತದೆ. ಇದರ ಎಲೆಗಳು ಒಗರಾಗಿದ್ದು, ಸೌಮ್ಯರೇಚಕ ಮತ್ತು ಶಕ್ತಿವರ್ಧಕದಂತೆ ಕಾರ್ಯಮಾಡುತ್ತವೆ. ಮಕ್ಕಳಿಗೆ ಹಲ್ಲು ಬರುವಾಗ ಎಲೆಗಳ ಕಷಾಯವನ್ನು (ಕಾಡೆ) ಕೊಡಲಾಗುತ್ತದೆ. ವಿಶೇಷವಾಗಿ ಹುಳಕಡ್ಡಿ, ಗಜಕರ್ಣ ಇತ್ಯಾದಿ ಚರ್ಮರೋಗಗಳಿಗೆ ಇದು ಸಿದ್ಧೌಷಧ. ಪರೋಪಜೀವಿಗಳ ಶತ್ರುವೂ ಅಹುದು. (ಆಂಟಿಪ್ಯಾರಾಸೈಟಿಕ್).
 ಲಕ್ಕಿಗಿಡ : ವರ್ಬಿನೇಸಿ ಕುಟುಂಬಕ್ಕೆ ಸೇರಿದ ವೈಟೆಕ್ಸ್‌ ನಿಗಂಡೋ ಎಂಬ ಸಸ್ಯ, ಇದಕ್ಕೆ ಹಲವು ಔಷಧೀಯ ಗುಣಗಳಿವೆ. ಎಲೆಗಳನ್ನು ಮೆಣಸಿನೊಡನೆ ಕೂಡಿಸಿ ಸೇವಿಸಿದರೆ ನೆಗಡಿ, ಜ್ವರ ಗುಣವಾಗುತ್ತದೆ. ಒಣ ಎಲೆಗಳನ್ನು ತಂಬಾಕಿನಂತೆ ಸೇವಿಸಿದರೆ ತಲೆಶೂಲೆ ಇಲ್ಲವಾಗುತ್ತದೆ. ಎಲೆಗಳನ್ನು ಅರೆದು ಸಂದುಗಳ ಬಾವು, ಹಿಗ್ಗದ ಯಕೃತ್ತು ಮತ್ತು ಪ್ಲೀಹ ಮತ್ತು ಕೆಲವು ಬಗೆಯ ಗಾಯಗಳಿಗೆ ಬಳಸುವುದುಂಟು. ಕೂದಲು ಬೆಳೆಯಲೂ ಎಲೆಗಳನ್ನು ಉಪಯೋಗಿಸಲಾಗುತ್ತಿದೆ.
 ಪುಷ್ಪಗಳಿಂದ ದೊರೆಯುವ ಔಷಧಗಳು 
 ಮದುಗಣಿಕೆ ಅಥವಾ ಉಮ್ಮತ್ತಿ : ಸೊಲನೇಸಿ ಕುಟುಂಬಕ್ಕೆ ಸೇರಿದ ದತ್ತೂರ ಸ್ಟ್ರಮೋನಿಯಂಗೆ ಮದುಗಣಿಕೆ ಅಥವಾ ಉಮ್ಮತ್ತಿ ಎಂತಲೂ ಹೆಸರು. ಅದರ ಒಣಗಿಸಿದ ಎಲೆ ಮತ್ತು ಹೂಗಳಿಂದ ಸ್ಟ್ರಮೋನಿಯಂ ಎಂಬ ಔಷಧವಸ್ತು ದೊರೆಯುತ್ತದೆ. ಅದು ಅತ್ಯಂತ ವಿಷಪುರಿತವಾಗಿದ್ದು, ಕೆಲವು ವೇಳೆ ಬೆಲ್ಲಡೋನಾಕ್ಕೆ ಬದಲಿ ವಸ್ತುವಾಗಿ ಇದನ್ನು ಬಳಸುವುದುಂಟು.
 ಸ್ಯಾಂಟೊನಿನ್ : ಇದು ಕಂಪಾಸಿóಟಿ ಕುಟುಂಬಕ್ಕೆ ಸೇರಿದ ಅರ್ಟಿಮಿಸಿಯ ಸೈನ ಮತ್ತು ಆ.ಅಬ್ಸಿಂತಿಯಮ್ ಎಂಬ ಸಸ್ಯಗಳ ಎಲೆ ಮತ್ತು ಹೂಗಳಿಂದ ದೊರೆಯುವ ಔಷಧವಸ್ತು. ಇದು ರಷ್ಯ ಮತ್ತು ತುರ್ಕಿಸ್ತಾನಗಳಿಂದ ಪರದೇಶಗಳಿಗೆ ರಫ್ತಾಗುತ್ತದೆ. ಇದು ಉದರಶೂಲೆ ಮತ್ತು ಜಂತುಹುಳುಗಳಿಗೆ ಪರಿಣಾಮಕಾರಿ ಔಷಧ.
 ಎಕ್ಕ : ಆಸ್ಕ್ಲಿಪಿಯಡೇಸಿ ಕುಟುಂಬಕ್ಕೆ ಸೇರಿದ ಕೆಲೊಟ್ರೊಪಿಸ್ ಪ್ರೊಸಿರ, ಕೆ.ಜೈಗಾಂಷಿಯ ಇತ್ಯಾದಿ ಸಸ್ಯಗಳು. ಇವು ದೊಡ್ಡ ಪೊದರು ಅಥವಾ ಕಂಟಿಯಂತೆ ಬೆಳೆಯುವುವು. ಹೂಗಳನ್ನು ಹೊಟ್ಟೆಗೆ ಶಕ್ತಿವರ್ಧಕದಂತೆಯೂ ಅಸ್ತಮ, ಶೀತ, ತೂನ್ನು, ಸಫಿಲಿಸ್ ಮತ್ತು ಗನೋರಿಯ ಮುಂತಾದ ರೋಗಗಳಿಗೂ ಬಳಸುತ್ತಾರೆ
 ದಾಳಿಂಬ : ಪ್ಯುನಿಕೇಸಿ ಕುಟುಂಬಕ್ಕೆ ಸೇರದ ಪ್ಯುನಿಕ ಗ್ರನೇಟಂ ಎಂಬ ಸಸ್ಯ. ಇದರ ಹೂ, ಮೊಗ್ಗುಗಳನ್ನು ಪರಿಷ್ಕರಿಸಿ ಬಿಳಿಸ್ರಾವ, ಅತಿಸಾರ, ಆಮಶಂಕೆ, ಶ್ವಾಸನಾಳದೋಷ ಇತ್ಯಾದಿಗಳಿಗೂ ಎಳೆಯ ಹಾಗೂ ಒಣಗಿದ ಹೂಗಳ ಪುಡಿಯನ್ನು ಜಂತುಹುಳುಗಳ ನಾಶ, ಮೂಗಿನಿಂದ ರಕ್ತಹರಿಯುವಿಕೆ ಇತ್ಯಾದಿಗಳಿಗೂ ಔಷಧರೂಪದಲ್ಲಿ ಬಳಸಲಾಗುತ್ತದೆ. ಗಿಡ ಒಂದು ದೊಡ್ಡ ಪೊದರು ಅಥವಾ ಕಂಟಿಯಂತೆ ಬೆಳೆಯುತ್ತದೆ. ಹಿಂದೂಸ್ತಾನಿಯಲ್ಲಿ ಅದಕ್ಕೆ ಗುಲ್ನಾರ್ ಎಂತಲೂ ಹೆಸರು.
 ಚೆಂಡುಹೂ : ಕಂಪಾಸಿóಟಿ ಎಂಬ ಕುಟುಂಬಕ್ಕೆ ಸೇರಿದ ಕ್ಯಾಲೆಂಡ್ಯೂಲ ಅಫಿಸಿನಾಲಿಸ್ ಅಥವಾ ಚೆಂಡುಹೋವಿನ ಹೂಪಕಳೆಗಳನ್ನು ನೋವು, ಕೀಟಗಳು ಕಡಿಯುವುದರಿಂದಾಗುವ ತುರಿಕೆ, ಉಳುಕು ಇತ್ಯಾದಿಗಳಿಗೆ ಔಷಧವಾಗಿ ಬಳಸುತ್ತಾರೆ.
 ವಯೋಲಾ : ವಯೊಲೇಸಿ ಕುಟುಂಬಕ್ಕೆ ಸೇರಿದ ವಯೊಲಾ ಓಡೊರೇಟ ಎಂಬ ಸಸ್ಯ. ಈ ಪ್ರಭೇದದಲ್ಲಿ ಹಲವಾರು ಬಗೆಗಳಿವೆ. ಇವು ರೇಚಕ ಮತ್ತು ಮೂತ್ರವರ್ಧಕ ಗುಣವುಳ್ಳವು. ಇವುಗಳನ್ನು ಕೆಮ್ಮು, ಗಂಟಲುನೋವು, ಯಕೃತ್ತಿನ ಹಾಗೂ ಮೂತ್ರಪಿಂಡಗಳ ವಿಕಾರಗಳು, ವಿವಿಧ ರೀತಿಯ ಬಾವು-ನೋವುಗಳಿಗೆ ಉಪಯೋಗಿಸಲಾಗುತ್ತದೆ.
 ಕುಂಕುಮ ಕೇಸರಿ : ಇರಿಡೇಸಿ ಕುಟುಂಬಕ್ಕೆ ಸೇರಿದ ಕ್ರಾಕಸ್ ಸಟೈವಸ್ ಎಂಬ ಮೂಲಿಕೆಯ ಹೂಗಳಲ್ಲಿ 3 ಶಾಖೆಗಳಿಂದಾದ ದೊಡ್ಡ ಶಲಾಕಾಗ್ರವೊಂದು ಇದೆ. ಈ ಶಲಾಕಾಗ್ರದ ತುದಿಯಲ್ಲಿ ಇರುವ ಕಿತ್ತಳೆಬಣ್ಣದ ಭಾಗವೇ ಶುದ್ಧವಾದ ಕೇಸರಿ. ಉಳಿದ ಭಾಗಗಳು ಅಶುದ್ಧ, ಕೇಸರಿಯನ್ನು ಮಿಠಾಯಿ, ಸಿಹಿ ಮತ್ತು ಮಸಾಲೆ ತಿಂಡಿತಿನಸುಗಳಲ್ಲಿ ಸುವಾಸನೆ ಮತ್ತು ಆಕರ್ಷಕ ಬಣ್ಣಕ್ಕೆ ಬಳಸುವುದುಂಟು. ಔಷಧೀಯ ದೃಷ್ಟಿಯಿಂದಲೂ ಇದು ಮುಖ್ಯವಾಗಿದ್ದು, ಮಕ್ಕಳಿಗೆ ಶೀತ, ನೆಗಡಿ ಮುಂತಾದುವುಗಳಿಗೆ ಬಳಸುವುದುಂಟು.
 ಫಲ-ಬೀಜಗಳಿಂದ ದೊರೆಯುವ ಔಷಧಿಗಳು  
 ಜೀರಿಗೆ : ಅಂಬೆಲಿಫೆರಿ ಕುಟುಂಬಕ್ಕೆ ಸೇರಿದ ಕ್ಯುಮಿನಂ ಎಂಬ ಸಸ್ಯಗಳ ಫಲಗಳೇ ಜೀರಿಗೆ. ಇವುಗಳಿಗೆ ವಾತಹರ, ಮೂತ್ರವರ್ಧಕ, ಪ್ರಚೋದಕ, ಹಸಿವನ್ನು ಉಂಟು ಮಾಡುವುದು ಇತ್ಯಾದಿ ವಿಶೇಷ ಗುಣಗಳಿವೆ. ಇವನ್ನು ಅತಿಸಾರ, ಅಗ್ನಿಮಾಂದ್ಯ ಮತ್ತು ಹಾಲು ಉತ್ಪಾದನೆಯನ್ನು ತೀವ್ರಗೊಳಿಸುವುದು ಇತ್ಯಾದಿಗಳಿಗೆ ಔಷಧವಾಗಿ ಬಳಸುತ್ತಾರೆ. ಇವು ದ್ವೈವಾರ್ಷಿಕ ಮೂಲಿಕೆಗಳು.
 ಬಾಲಮೆಣಸು : ಪೈಪರೇಸಿ ಕುಟುಂಬಕ್ಕೆ ಸೇರಿದ ಪೈಪರ್ ಲಾಂಗಮ್ ಎಂಬ ಬಳ್ಳಿಯ ಫಲ ಔಷಧ ಗುಣವುಳ್ಳದ್ದು. ಅದಕ್ಕೆ ಹೃದಯಕ್ರಿಯೆಯನ್ನು ಉತ್ತೇಜನಗೊಳಿಸುವ ರೇಚಕ, ವಾತಹರ, ಜೀರ್ಣಕಾರಿ, ಪುತಿನಾಶಕ ಇತ್ಯಾದಿ ಗುಣಗಳಿವೆ. ಒಣಗಿಸಿದ ಫಲ ಅಥವಾ ಕಾಳನ್ನು ಅರೆದು ಜೇನುತುಪ್ಪದೊಡನೆ ಕೂಡಿಸಿ ಅಗ್ನಿಮಾಂದ್ಯ, ಕೆಮ್ಮು, ಶ್ವಾಸನಾಳ ದೋಷಗಳು, ಅಸ್ತಮ, ಅಜೀರ್ಣ ಮುಂತಾದ ರೋಗಗಳಿಗೆ ಔಷಧವಾಗಿ ಕೊಡುವುದುಂಟು. ಅಂತೆಯೇ ಕಪ್ಪು ಮೆಣಸು (ಪೈಪರ್ ನಿಗ್ರಮ್) ಕಾಳುಗಳಲ್ಲಿ ಪೈಪರಿನ್ ಎಂಬ ಕ್ಷಾರೀಯ ಘಟಕವುಂಟು. ಮೆಣಸಿನ ಬೆಳೆ ಪಶ್ಚಿಮ ಘಟ್ಟದ ಪ್ರದೇಶಗಳು ಮತ್ತು ಕೇರಳದಲ್ಲಿ ಹೆಚ್ಚು. ಮೆಣಸನ್ನು ಸಾಮಾನ್ಯ ನಿಶ್ಯಕ್ತಿ, ಅತಿಸಾರ, ಕಾಲರಾ, ಚಳಿಜ್ವರ, ಗಂಟಲುಬೇನೆ, ಪಾಶರ್ವ್‌ವಾಯು, ತಲೆಶೂಲೆ, ಹಲ್ಲುನೋವು, ಮೂಲವ್ಯಾಧಿ (ಪೈಲ್ಸ್‌), ಶೋಣಿತವಾಯು, ಚರ್ಮರೋಗಗಳು ಇತ್ಯಾದಿಗಳಿಗೆ ಔಷಧವಾಗಿ ಬಳಸುವುದುಂಟು.
 ನೆಲ್ಲಿ : ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿದ ಎಂಬ್ಲಿಕ ಅಫಿಸಿನಾಲಿಸ್ ಎಂಬುದಕ್ಕೆ ನೆಲ್ಲಿಕಾಯಿ ಎಂತಲೂ ಹೆಸರು. ಈ ಫಲಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚು. ಇವುಗಳಿಗೆ ಶೈತ್ಯಕ, ರೇಚಕ. ಮೂತ್ರವರ್ಧಕ ಇತ್ಯಾದಿ ಗುಣಗಳಿವೆ. ಪಚನವಿಕಾರಗಳಿಗೆ ಇವು ಪರಿಣಾಮಕಾರಿ. ದೇಹವನ್ನು ತಂಪುಗೊಳಿಸುವುದೂ ಉಂಟು. ಅದರಿಂದ ಇವುಗಳ ಉಪಯೋಗ ಉಪ್ಪಿನಕಾಯಿ, ಕೇಶತೈಲ ಇತ್ಯಾದಿಗಳಲ್ಲಿ ಹೆಚ್ಚು.
 ಅಜವಾನ (ಬಿಷಪ್ಸ್‌ ವೀಡ್) : ಅಂಬೆಲಿಫೆüರಿ ಕುಟುಂಬಕ್ಕೆ ಸೇರಿದ ಕೇರಂ ಕಾಪ್ಟಿಕಮ್ ಎಂಬ ದ್ವೈವಾರ್ಷಿಕ ಮೂಲಿಕೆಯ ಫಲ ಮತ್ತು ಬೀಜಗಳಿಗೆ ಅಜವಾನ ಎಂದು ಹೆಸರು. ಓಮು ಎಂದೂ ಕರೆಯುತ್ತಾರೆ. ಇವುಗಳಿಗೆ ವಾತಹರ, ಕಫ ನಿರ್ಮೂಲನ ಮತ್ತು ಉತ್ತೇಜಕ ಗುಣಗಳಿವೆ. ಇವುಗಳನ್ನು ಅಗ್ನಿಮಾಂದ್ಯ, ಉದರಶೂಲೆ, ಅತಿಸಾರ, ಕಾಲರಾ ಇತ್ಯಾದಿಗಳಿಗೂ ಸಿದ್ಧೌಷಧವೆಂದು ಬಳಸುವುದುಂಟು. 
5 ಅಳಲೆಕಾಯಿ (ಮಿರೋಬಲನ್) : ಕಾಂಬ್ರಿಟೇಸಿ ಕುಟುಂಬಕ್ಕೆ ಸೇರಿದ ಟರ್ಮಿನೇಲಿಯ ಚಬುಲ ಎಂಬುದಕ್ಕೆ ಅಳಲೆಕಾಯಿ ಎಂತಲೂ ಹಿಂದೂಸ್ತಾನಿಯಲ್ಲಿ ಹರ್ ಎಂತಲೂ ಹೆಸರು. ಈ ಮರದ ಫಲಗಳಿಗೆ ವೈದ್ಯಕೀಯ ಮಹತ್ತ್ವಹೆಚ್ಚು. ಇವುಗಳಿಗೆ ತೀಕ್ಷಣರೇಚಕಶಕ್ತಿ ಇದ್ದು, ಇವುಗಳನ್ನು ಮೂಲವ್ಯಾಧಿ, ಆಮಶಂಕೆ, ಅಸ್ತಮ, ವಾಂತಿ, ಬೆಳೆದ ಯಕೃತ್ತು ಮತ್ತು ಪ್ಲೀಹಗಳಂಥ ವಿಕಾರಗಳಿಗೆ ಔಷಧವಾಗಿ ಬಳಸುವುದುಂಟು. ಕಾಯಿಯ ಪುಡಿಯನ್ನು ಹುಣ್ಣು, ಗಾಯ, ವಸಡುಸ್ರಾವ ಇತ್ಯಾದಿಗಳಿಗೂ ಕಾಯಿಯನ್ನು ತೇಯ್ದು ಸುಟ್ಟ ಗಾಯ, ಮೂಲವ್ಯಾಧಿ ಇತ್ಯಾದಿಗಳಿಗೂ ಕಾಯನ್ನು ನೀರಿನಲ್ಲಿ ಕುದಿಸಿ, ಅದರ ಕಷಾಯವನ್ನು ರಕ್ತ ಸೋರುವ ಮೂಲವ್ಯಾಧಿಯನ್ನು ನಿಲ್ಲಿಸುವುದಕ್ಕೂ ಮತ್ತು ಬಾಯಿ ಮುಕ್ಕಳಿಸುವುದಕ್ಕೂ ಬಳಸುವುದುಂಟು.
 ಹೊಂಗೆ : ಪ್ಯಾಲಿಪಿಯೊನೇಸಿ ಎಂಬ ಉಪ ಕುಟುಂಬಕ್ಕೆ ಸೇರಿದ ಪೊಂಗೆಮಿಯ ಗ್ಲಾಬ್ರಾ ಅಥವಾ ಪೊ.ಪಿನ್ನೇಟ ಎಂಬ ಈ ಸಸ್ಯಗಳಿಗೆ ಹಿಂದೂಸ್ತಾನಿಯಲ್ಲಿ ಕಾರಂಜ್ ಎನ್ನುತ್ತಾರೆ. ಈ ಮರದ ಬೀಜಗಳನ್ನು ನಾಯಿಕೆಮ್ಮು ಮತ್ತು ಮೂಲ ಶ್ವಾಸನಾಳ ದೋಷಗಳಿಗೆ ಔಷಧವಾಗಿ ವಿಶೇಷವಾಗಿ ಬಳಸುವುದುಂಟು. ಬೀಜಗಳನ್ನು ನುಣ್ಣಗೆ ಅರೆದು ತೊನ್ನು, ಚರ್ಮರೋಗಗಳು, ಶೋಣಿತವಾಯು, ಮುಂತಾದುವುಗಳಿಗೂ ಬಳಸಲಾಗುತ್ತದೆ. ಹೊಂಗೆ ಬೀಜದ ಎಣ್ಣೆಯನ್ನು ಕಜ್ಜಿ, ತುರಿಕೆ ಇತ್ಯಾದಿಗಳಿಗೂ ಉಪಯೋಗಿಸುವುದುಂಟು.
 ಮೆಂತ್ಯ : ಲೆಗ್ಯುಮಿನೋಸಿ ಕುಟುಂಬಕ್ಕೆ ಸೇರಿದ ಟ್ರೈಗೊನೆಲ್ಲ ಫೀನಂಗ್ರೀಕಂ ಎಂಬ ಸಸ್ಯಮೂಲಿಕೆ. ಈ ಮೂಲಿಕೆಯ ಬೀಜದಲ್ಲಿ ಟ್ರೈಗೊನೆಲ್ಲಿನ್ ಎಂಬ ರಾಸಾಯನಿಕ ಘಟಕವುಂಟು. ಇದು ಮೂತ್ರವರ್ಧಕವೂ ಆಹಾರ ದೃಷ್ಟಿಯಿಂದ ಪೋಷಕವೂ ಆದುವು. ಬೀಜಗಳನ್ನು ವಿವಿಧ ರೀತಿಯಲ್ಲಿ ಹುರಿದು, ಬೇಯಿಸಿ, ಅರೆದು, ಔಷಧವಾಗಿ ಕೆಮ್ಮು, ಅತಿಸಾರ, ಆಮಶಂಕೆ, ಅಗ್ನಿಮಾಂದ್ಯ, ಉದರಶೂಲ; ಜಲೋದರ, ಕರುಳುಬೇನೆ, ಕುರು, ಕೇಶತೈಲ ಇತ್ಯಾದಿಗಳಿಗೆ ಬಳಸುತ್ತಾರೆ.
 ಬಿಲ್ವಪತ್ರೆಕಾಯಿ : ರುಟೇಸಿ ಕುಟುಂಬಕ್ಕೆ ಸೇರಿದ ಈಗಲ್ ಮಾರ್ಮೆಲೋಸ್ ಎಂಬ ಮರದ ಕಾಯಿ. ಬಿರುಸು ಕವಚವುಳ್ಳ ಈ ಫಲದ ಬಳಕೆ ವೈದ್ಯಕೀಯದಲ್ಲಿ ಬಹಳ, ಹಣ್ಣಿನ ತಿರುಳು ಒಗರು. ಬಲವರ್ಧಕ ಮತ್ತು ಸೌಮ್ಯರೇಚಕ. ಅದನ್ನು ಬೇಸಿಗೆಯಲ್ಲಿ ತಂಪು ಪಾನೀಯವಾಗಿಯೂ ಬಳಸುವುದುಂಟು. ತಿರುಳನ್ನು ಅತಿಸಾರ, ಕರುಳಿನ ದೋಷಗಳು, ಮಲಬದ್ಧತೆ ಇತ್ಯಾದಿಗಳಿಗೂ ಔಷಧವಾಗಿ ಉಪಯೋಗಿಸಲಾಗುತ್ತದೆ.
 ಸ್ಟ್ರಿಕ್ನಿನ್ : ಇದು ಲೊಗಾನಿಯೇಸಿ ಕುಟುಂಬಕ್ಕೆ ಸೇರಿದ ಸ್ಟ್ರಿಕ್ನಾಸ್ ನಕ್ಸ್‌ವಾಮಿಕ ಎಂಬ ಮರದ ಬೀಜಗಳಿಂದ ದೊರೆಯುತ್ತದೆ. ಈ ಮರಗಳು ಹೆಚ್ಚಾಗಿ ದಕ್ಷಿಣ ಭಾರತ, ಒರಿಸ್ಸ, ಬಂಗಾಲ, ಶ್ರೀಲಂಖ ಮತ್ತು ಚೀನ ದೇಶಗಳಲ್ಲಿ ಬೆಳೆಯುತ್ತದೆ. ತಾಜಾ ಫಲಗಳನ್ನು ಸಂಗ್ರಹಿಸಿ ಒಣಗಿಸುತ್ತಾರೆ. ಬೀಜದಲ್ಲಿ ಸ್ಟ್ರಿಕ್ನಿನ್ ಮತ್ತು ಬ್ಯೂಸಿನ್ ಎಂಬ ಕ್ಷಾರೀಯ ಘಟಕಗಳಿವೆ. ಈ ಔಷಧ ಎಲ್ಲೆ ಮೀರಿದರೆ ಅತ್ಯಂತ ವಿಷಪುರಿತವೂ ಹೌದು. ಇದನ್ನು ಜಗತ್ತಿನಾದ್ಯಂತ ಒಳ್ಳೆಯ ಶಕ್ತಿವರ್ಧಕವಾಗಿ ಬಳಸುವುದುಂಟು ಪಾಶರ್ವ್‌ವಾಯು, ಮಲಬದ್ಧತೆ, ಚಿತ್ತೋದ್ರೇಕ, ಅತಿಸಾರ, ಉದರಶೂಲೆ ಮುಂತಾದುವುಗಳಿಗೂ ಇದು ಸಿದ್ಧೌಷಧ. 
 ಅಫೀಮು (ಓಪಿಯಂ) : ಪಪಾವರೇಸಿ ಕುಟುಂಬಕ್ಕೆ ಸೇರಿದ ಪಪಾವರ್ ಸಮ್ನಿಫೆರಂ ಎಂಬ ವಾರ್ಷಿಕ ಮೂಲಿಕೆಯಿಂದ ದೊರೆಯುವ ವಸ್ತು. ಈ ಗಿಡ ಭಾರತ, ಚೀನಗಳಲ್ಲಿ ಹೆಚ್ಚು ಬೆಳೆಯುತ್ತದೆ. ಕಚ್ಚಾ ಫಲಗಳಮೇಲೆ ಸಣ್ಣ ಸಣ್ಣ ಕಚ್ಚುಗಳನ್ನು ಮಾಡಿ ಹೊರಬರುವ ಹಾಲನ್ನು ಒಣಗಿಸಿ ಸಂಗ್ರಹಿಸುತ್ತಾರೆ. ಈ ಹಾಲೇ ಅಫೀಮು. ಇದರಲ್ಲಿ ಸುಮಾರು 25 ಬಗೆಯ ಕ್ಷಾರೀಯ ಘಟಕಗಳಿವೆ. ಅವುಗಳಲ್ಲಿ ಮುಖ್ಯವಾಗಿ ಮಾರ್ಫಿನ್, ಕೋಟಿಯಿನ್, ನಾರ್ಕೊಟಿನ್, ಥಿಬೇನ್, ನಾರ್ಸಿಯಿನ್ ಇತ್ಯಾದಿ ಘಟಕಗಳಿವೆ. ಇವು ಉಪಶಾಮಕ ಮತ್ತು ಮಾದಕ ವಸ್ತುಗಳು. ನಿದ್ರೆ ಬರಿಸುವುದಕ್ಕೆ ಇವುಗಳ ಬಳಕೆ ಹೆಚ್ಚು. ಬೀಜದಿಂದ ತೆಗೆದ ಎಣ್ಣೆಯನ್ನು ಔಷಧವಾಗಿ ಹಲವಾರು ರೀತಿ ಬಳಸುವುದುಂಟು. ಕರುಳುಬೇನೆ, ಅತಿಸಾರ, ಆಮಶಂಕೆ ಇತ್ಯಾದಿಗಳಿಗೂ ಇವು ಉಪಯುಕ್ತ. ಅಲ್ಪ ಪ್ರಮಾಣದಲ್ಲಿ ಇದನ್ನು ಔಷಧವಾಗಿ ಉಪಯೋಗಿಸುವುದು ವಾಡಿಕೆ.
 ಔಡಲ ಅಥವಾ ಹರಳು : ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿದ ರಿಸಿನಸ್ ಕಮ್ಯೂನಿಸ್ ಎಂಬ ಚಿಕ್ಕ ಮರದ ಒಣಫಲಗಳಿಂದ ತೆಗೆದ ಬೀಜಗಳು. ಇದು ಭಾರತದಲ್ಲಿ ಕೆಲವು ಕಡೆ ತಾನಾಗಿಯೇ ಬೆಳೆದರು ಅನೇಕ ಕಡೆ ಅದನ್ನು ಉದ್ದೇಶಪುರ್ವಕವಾಗಿಯೂ ಬೆಳೆಸುತ್ತಾರೆ. ಬೀಜವನ್ನು ಒತ್ತಡಕ್ಕೊಳಪಡಿಸಿಯೋ ಇಲ್ಲವೆ ನೀರಿನಲ್ಲಿ ಕುದಿಸಿಯೋ ಎಣ್ಣೆಯನ್ನು ತೆಗೆಯುತ್ತಾರೆ. ಬೀಜದಲ್ಲಿ ರಿಸಿನಿನ್ ಎಂಬ ಕ್ಷಾರೀಯ ಘಟಕವಿದೆ. ಇದು ಎಲ್ಲ ವಯಸ್ಕರಿಗೂ ಉತ್ತಮ ರೇಚಕ. ಎಣ್ಣೆಯನ್ನು ಆಮಶಂಕೆ, ಕರುಳಿನ ಬಾಧೆ, ಅಸ್ತಮ, ಜಲೋದರ ಇತ್ಯಾದಿಗಳಿಗೊ ವಿವಿಧ ರೀತಿ ಬಳಸಲಾಗುತ್ತದೆ. ಎಲೆ ಅಥವಾ ಬೀಜಗಳಿಂದ ತಯಾರಿಸಿದ ಬೆಚ್ಚಾರವನ್ನು ಕುರು, ಬಾವು ಮುಂತಾದುವುಗಳಿಗೂ ಉಪಯೋಗಿಸುವುದುಂಟು.
 ಚೌಲಮೂಗ್ರ ಎಣ್ಣೆ : ಇದು ಫ್ಲಕೂರ್ಟಿಯೇಸಿ ಕುಟುಂಬಕ್ಕೆ ಸೇರಿದ ಗೈನೊಕಾರ್ಡಿಯ ಓಡೊರೇಟ, ಹಿಡ್ನೊಕಾರ್ಪಸ್ ಕುರ್ಜಿ ಮತ್ತು ಹಿ.ವೈಟಿಯಾನ ಎಂಬ ನಿತ್ಯಹರಿದ್ವರ್ಣ ಮರಗಳ ಬೀಜಗಳಿಂದ ತೆಗೆದ ಎಣ್ಣೆ. ಶತಮಾನಗಳಿಂದ ಈ ಎಣ್ಣೆಯನ್ನು ತೊನ್ನು ನಿವಾರಣೆಗೂ ಇಸುಬು, ಕಜ್ಜಿ ಮುಂತಾದ ಕೆಲವು ಚರ್ಮರೋಗಗಳಿಗೂ ಬಳಸಲಾಗುತ್ತಿದೆ. ಈಗೀಗ ಶೋನಿತವಾಗು, ಸಿಫಿಲಿಸ್, ಸಂಧಿವಾತ ಇತ್ಯಾದಿಗಳಿಗೂ ಔಷಧವಾಗಿ ಬಳಸಲಾಗುತ್ತದೆ.
 ಇಸ್ಪಗೋಲ : ಪ್ಲಾಂಟಾಜಿನೇಸಿ ಕುಟುಂಬಕ್ಕೆ ಸೇರಿದ ಪ್ಲಾಂಟಾಗೋ ಜಾತಿಯ ಮೂಲಿಕೆಗಳ (ಉದಾ: ಪ್ಲಾ.ಓವೇಟಾ, ಪ್ಲಾ.ಇಂಡಿಕ, ಪ್ಲಾ.ಸಿಲಿಯಂ ಇತ್ಯಾದಿ) ಬೀಜಗಳಿಂದ ಉತ್ಪಾದನೆಯಾಗುವ ಔಷಧ. ಬೀಜದ ಆವರಣದಲ್ಲಿ ಲೋಳೆಯಂಥ ವಸ್ತುವೊಂದು ಇರುತ್ತದೆ. ಇದು ರೇಚಕ ಹಾಗೂ ಇತರ ಔಷಧೀಯ ಗುಣಗಳುಳ್ಳದ್ದು. ಇದನ್ನು ಜಠರ ಮತ್ತು ಕರುಳಿನ ಸಂಬಂಧದ ಬೇನೆಗಳು, ಮಲಬದ್ಧತೆ, ಆಮಶಂಕೆ, ಅತಿಸಾರ, ಉದರಶೂಲೆ ಇತ್ಯಾದಿಗಳಿಗೆ ಬಳಸಲಾಗುತ್ತದೆ. ಬೀಜ ಮತ್ತು ಎಣ್ಣೆಯನ್ನು ಕೂಡಿಸಿದ ಬೆಚ್ಚಾರವನ್ನು ಸಂಧಿವಾತ, ಬಾವು ಮುಂತಾದುವುಗಳಿಗೆ ಶಮನಕಾರಿಯಾಗಿ ಬಳಸುವುದುಂಟು.
 ಕಕ್ಕೆಗಿಡ : ಲೆಗ್ಯುಮಿನೋಸಿ ಗುಂಪಿಗೆ ಸೇರಿದ ಕ್ಯಾಷಿಯ ಫಿಸ್ಟುಲ ಎಂಬ ಈ ಕಂಟಿಗೆ ಅಮಲ್ತಾಸ್ ಎಂದೂ ಹೆಸರು. ಇದು ಆಯುರ್ವೇದ ಮತ್ತು ಯುನಾನಿ ಪದ್ಧತಿಯ ಔಷಧಗಳಲ್ಲಿ ಪ್ರಾಮುಖ್ಯವಾಗಿದೆ. ಇದರ ಕಾಯಿ ಫಲಗಳು ಸೌಮ್ಯರೇಚಕ, ಇದು ಉದರಶೂಲೆ, ಬೊಜ್ಜು ಇತ್ಯಾದಿಗಳಿಗೆ ಉಪಯುಕ್ತ. ಬಾದಾಮಿ ಎಣ್ಣೆ ಅಥವಾ ಅಗಸೆ ಎಣ್ಣೆಯೊಡನೆ ಕರುಳಿನ ದೋಷಗಳಿಗೂ ಬಳಸಲಾಗುತ್ತದೆ.
 ಪರಂಗಿ ಹಣ್ಣು ಮತ್ತು ಬೀಜ (ಪಪಾತಯ) : ಕ್ಯಾರಿಕೇಸಿ ಕುಟುಂಬಕ್ಕೆ ಸೇರಿದ ಕ್ಯಾರಿಕ ಪಪಾಯ ಎಂಬ ಮರದ ಹಣ್ಣು ಮತ್ತು ಬೀಜಗಳು ಔಷಧೀಯ ಗುಣವುಳ್ಳವು. ಅಪಕ್ವವಾದ ಹಣ್ಣಿನಿಂದ ಬರುವ ಹಾಲಿನಲ್ಲಿ ಪಪಾಯಿನ್ ಎಂಬ ಘಟಕವುಂಟು. ಇದು ಜಂತುಹುಳುನಾಶಕ. ಕರುಳುಬೇನೆ, ಬೆಳೆದ ಯಕೃತ್ತು ಮತ್ತು ಪ್ಲೀಹ ಮುಂತಾದುವುಗಳಿಗೂ ಪರಮೌಷಧ. ಬೀಜಗಳಲ್ಲಿ ಕ್ಯಾರಿಸಿನ್ ಎಂಬ ಘಟಕವಿದೆ. ಇದು ರಕ್ತ ಚಿಮ್ಮುವ ಮೂಲವ್ಯಾಧಿ. ಹುಳುಕಡ್ಡಿ, ಮತ್ತಿತರ ಚರ್ಮರೋಗಗಳಿಗೆ ಪರಿಣಾಮಕಾರಿ ಔಷಧ.
 ಕುಸುಬೆ : ಇದು ಕಂಪಾಸಿóಟಿ ಕುಟುಂಬಕ್ಕೆ ಸೇರಿದ ಕಾರ್ಥಮಸ್ ಟಿಂಕ್ಟೋರಿಯಸ್ ಎಂಬ ಚಿಕ್ಕ ಕಂಟಿ ಗಿಡಗಳ ಬೀಜಗಳಿಂದ ದೊರೆಯುವ ಎಣ್ಣೆ. ಇದು ಸೌಮ್ಯರೇಚಕ. ಬೀಜದ ಬೆಚ್ಚಾರದಿಂದ ಗರ್ಭಕೋಶದ ಬಾವು ಶಮನಗೊಳ್ಳುತ್ತದೆ. ಎಣ್ಣೆಯನ್ನು ವ್ರಣ ಮತ್ತು ಬಾತ ಎಲುಬು ಸಂಧಿಗಳಲ್ಲಿ ನೋವು ಕಡಿಮೆ ಮಾಡಲು ಬಳಸಲಾಗುತ್ತದೆ.

ಔಷಧಿಸಸ್ಯಗಳು ಅನೇಕಾನೇಕ. ಅವುಗಳಲ್ಲಿ ಗೊತ್ತಿಲ್ಲದಿರುವುದು ಇಲ್ಲವೆ ಇನ್ನೂ ಬಳಕೆಗೆ ಬಂದಿಲ್ಲದಿರುವುವು ಎಷ್ಟೊ ಇವೆ. ದಿನಬಳಕೆಯ ಎಷ್ಟೊ ಮಸಾಲೆ ಮತ್ತು ಸಾಂಬಾರವಸ್ತುಗಳೂ ಕೆಲಮಟ್ಟಿಗೆ ಔಷಧೀಯ ಗುಣಗಳನ್ನು ಪಡೆದಿರುತ್ತವೆ.